ಸೂರತ್ ಕಟ್ಟಡದಲ್ಲಿ ಬೆಂಕಿ ಅವಘಡ- 20 ವಿದ್ಯಾರ್ಥಿಗಳು ದಾರುಣ ಸಾವು

ಸೂರತ್, ಮೇ 25: ಗುಜರಾತ್ ನ ಸೂರತ್ ನಲ್ಲಿರುವ ತಕ್ಷಿಲಾ ಆರ್ಕೇಡ್ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡ ಕನಿಷ್ಠ 20 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ಕಟ್ಟಡದ ಎರಡನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೆಯೇ ಅದು ಮೇಲ್ಭಾಗಕ್ಕೂ ಆವರಿಸಿತ್ತು. ಈ ಕಟ್ಟಡದಲ್ಲಿ ನಾಲ್ಕು ವಿಭಿನ್ನ ಕೋಚಿಂಗ್ ಕೇಂದ್ರಗಳು ನಡೆಯುತ್ತಿದ್ದವು.

ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆ ಆವರಿಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಅನೇಕ ವಿದ್ಯಾರ್ಥಿಗಳು ಕಟ್ಟಡದಿಂದ ಹೊರಕ್ಕೆ ಜಿಗಿದಿದ್ದರು. ಹಾಗೆ ಜಿಗಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾದರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೂರತ್ ನಲ್ಲಿ ನಡೆದ ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಗುಜರಾತ್‌ ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು. ಅಗ್ನಿ ಅವಘಡದಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ನಾಗರಿಕರೂ ಧಾವಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರೂ ನೆರವು ನೀಡಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದಾರೆ. ಹಾಗೂ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನೂ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಘೋಷಿಸಿದ್ದಾರೆ.

ಸೂರತ್ ಅಗ್ನಿ ದುರಂತ:

ಈ ಭೀಕರ ಘಟನೆಯಲ್ಲಿ ಯುವಕನೊಬ್ಬ ಇಬ್ಬರು ಬಾಲಕಿಯರ ಜೀವ ರಕ್ಷಿಸಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ. ಅದೇ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕೇತನ್ ಜೊರಾವಾಡಿಯಾ ಎಂಬ ಯುವಕ, ಬೆಂಕಿ ಮತ್ತು ದಟ್ಟ ಹೊಗೆಗೆ ಹೆದರದೆ ಅಲ್ಲಿಯೇ ಇದ್ದು, ಕಟ್ಟಡದಿಂದ ಬೀಳುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ.