ದೇಶದ ಭದ್ರತೆಯಲ್ಲಿ ಗುಜರಾತಿನ ಪಾತ್ರ ನಿರ್ಣಾಯಕ: ಪ್ರಧಾನಿ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ 2022 ಅನ್ನು ಉದ್ಘಾಟಿಸಿ, ದೀಸಾದಲ್ಲಿ ಹೊಸ ವಾಯುನೆಲೆಗೆ ಶಂಕುಸ್ಥಾಪನೆ ಮಾಡಿದರು. ಹೊಸ ವಾಯುನೆಲೆಯು ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

ಗುಜರಾತ್ ಭಾರತದ ರಕ್ಷಣಾ ಕೇಂದ್ರವಾಗಲಿದೆ ಮತ್ತು ಭಾರತದ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದ ಅವರು, ಹೊಸ ಏರ್‌ಫೀಲ್ಡ್ ನಿರ್ಮಾಣದ ಬಗ್ಗೆ ದೀಸಾದ ಜನರು ಉತ್ಸುಕರಾಗಿದ್ದಾರೆಂದು ನಾನು ಪರದೆಯ ಮೇಲೆ ನೋಡುತ್ತಿದ್ದೆ. ಈ ಏರ್‌ಫೀಲ್ಡ್ ಪ್ರಮುಖ ಪಾತ್ರ ವಹಿಸುತ್ತದೆ. ದೀಸಾ ಅಂತರಾಷ್ಟ್ರೀಯ ಗಡಿಯಿಂದ ಕೇವಲ 130 ಕಿಮೀ ದೂರದಲ್ಲಿದೆ. ನಮ್ಮ ಪಡೆಗಳು, ವಿಶೇಷವಾಗಿ ನಮ್ಮ ವಾಯುಪಡೆಯು ದೀಸಾದಲ್ಲಿ ಉಳಿದುಕೊಂಡರೆ, ಪಶ್ಚಿಮ ಭಾಗದಿಂದ ಬರುವ ಯಾವುದೇ ಬೆದರಿಕೆಗಳಿಗೆ ನಾವು ಉತ್ತಮ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದರು.

ಗಾಂಧಿನಗರದಲ್ಲಿ ಆಯೋಜಿಸಲಾದ ಡಿಫೆನ್ಸ್ ಎಕ್ಸ್‌ಪೋ ನಲ್ಲಿ ಮೊಟ್ಟ ಮೊದಲ ಬಾರಿಗೆ ಕೇವಲ ಭಾರತೀಯ ಕಂಪನಿಗಳು ಮಾತ್ರ ಪಾಲುಗೊಂಡಿವೆ. ಈ ಪ್ರದರ್ಶನದಲ್ಲಿ ಕೇವಲ ‘ಮೇಡ್ ಇನ್ ಇಂಡಿಯಾ’ ರಕ್ಷಣಾ ಉಪಕರಣಗಳು ಮಾತ್ರ ಇರಲಿವೆ. ಮೊದಲ ಬಾರಿಗೆ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಮಣ್ಣಿನಿಂದ ಮತ್ತು ಭಾರತೀಯರ ಬೆವರಿನಿಂದ ತಯಾರಾದ ಅನೇಕ ಉತ್ಪನ್ನಗಳನ್ನು, ನಮ್ಮ ದೇಶದ ವಿಜ್ಞಾನಿಗಳು ಕಂಪನಿಗಳು ಮತ್ತು ಯುವಕ ಸಾಮರ್ಥ್ಯಗಳ ಪರಿಚಯವನ್ನು ಉಕ್ಕಿನ ಮನುಷ್ಯ ಸರದಾರ್ ವಲ್ಲಭ್ ಭಾಯಿ ಪಟೇಲರ ನಾಡಿನಲ್ಲಿ ನಿಂತು ವಿಶ್ವಕ್ಕೆ ತಿಳಿಸುತ್ತಿದ್ದೇವೆ. ಒಂದು ಕಾಲದಲ್ಲಿ ಪಾರಿವಾಳಗಳನ್ನು ಬಿಡುತ್ತಿದ್ದ ನಾವು ಈಗ ಚಿರತೆಗಳನ್ನು ಬಿಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಮೋದಿ ಹೇಳಿದರು.