ರಾಯರು ಬಂದರು ಮನೆಗೆ ಕನ್ನಡದಲ್ಲಿ ಬರ್ತಿದೆ ಗುಜರಾತಿ ಸಿನೆಮಾ…

ಸುಧಾರಾಣಿ ಹಾಗೂ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಹಾಗೂ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದ್ದ ಮೈಸೂರು ಮಲ್ಲಿಗೆ ಸಿನಿಮಾದ ಗೀತೆ ಇದಾಗಿದೆ. ಮೈಸೂರು ಮಲ್ಲಿಗೆ ಚಿತ್ರ 1992ರಲ್ಲಿ ಬಿಡುಗಡೆಯಾಗಿತ್ತು. ಖ್ಯಾತ ನಿರ್ದೇಶಕ ಎಸ್.​ ನಾಗಾಭರಣ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸುಧಾರಾಣಿ, ಗಿರೀಶ್​ ಕಾರ್ನಾಡ್​​, ಮಂಜು, ಸುಂದರರಾಜ್​​, ದತ್ತಣ್ಣ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ರಾಯರು ಬಂದರು ಮಾವನ ಮನೆಗೆ.. ಕನ್ನಡದ ಎವರ್ ಗ್ರೀನ್ ಹಾಡುಗಳಲ್ಲೊಂದು.
ಇದೇ ರಾಯರು ಬಂದರು ಮಾವನ ಮನೆಗೆ ಹಾಡಿನ ಸಾಲಿನ ಶೀರ್ಷಿಕೆಯಡಿ ಸಿನೆಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಇದರ ವಿಶೇಷತೆ ಏನೆಂದರೆ ಇದೊಂದು ಗುಜರಾತಿ ಸಿನಿಮಾ. ವರ ಪಧಾರವೋ ಸಾವಧಾನ ಎಂಬ ಟೈಟಲ್ ನಡಿ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡದಲ್ಲಿಯೂ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಇದೇ ಮೊದಲ ಬಾರಿಗೆ ಗುಜರಾತಿ ಚಿತ್ರವೊಂದನ್ನು ಕನ್ನಡದಲ್ಲಿ ಬಿಡುಗಡೆ ಮಾಡುವ ಪ್ರಯತ್ನಕ್ಕೆ ವಿಕ್ರಾಂತ್ ರೋಣ ಚಿತ್ರ ನಿರ್ಮಾಪಕ ಜಾಕ್ ಮಂಜು ಮುಂದಾಗಿದ್ದಾರೆ. ಸುದೀಪ್ ಆಪ್ತರಾಗಿರುವ ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ನಡಿ ರಾಯರು ಬಂದರು ಮಾವನ ಮನೆಗೆ ಸಿನೆಮಾವನ್ನು ಕರುನಾಡ ಪ್ರೇಕ್ಷಕರಿಗೆ ನೀಡುತ್ತಿದ್ದಾರೆ.

ರತ್ನಪುರ, ಜಿತಿ ಲೇ ಜಿಂದಗಿ ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ವಿಫುಲ್ ಶರ್ಮಾ ಅವರ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬಂದಿದೆ. ಈ ಸಿನೆಮಾಗೆ ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧು ತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಶಾಂತ್ ಬರೋಟ್, ಜಯ್ ಪಾಂಡ್ಯ ಮತ್ತು ಜೈಮಿನಿ ತ್ರಿವೇದಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮುಂದಿನ ತಿಂಗಳು ಜುಲೈ 7ಕ್ಕೆ ಕನ್ನಡದಲ್ಲಿ ರಾಯರು ಬಂದರು ಮಾವನ ಮನೆಗೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಚಿತ್ರತಂಡ ಬೆಂಗಳೂರಿನಲ್ಲಿಯೂ ಪ್ರಚಾರ ಕಾರ್ಯ ನಡೆಸಲಿದೆ.

ಅಂದಹಾಗೇ ರಾಯರು ಬಂದರು ಮಾವನ ಮನೆಗೆ ಸಿನೆಮಾ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ, ಕುಟುಂಬ, ಸಂಬಂಧಗಳ ಸುತ್ತ ಇಡೀ ಚಿತ್ರ ಸಾಗಲಿದೆ. ಗುಜರಾತಿ ಸಿನೆಮಾವೊಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿ ವಿಚಾರ. ಎಲ್ಲಾ ಚಿತ್ರಗಳನ್ನು ನೆಚ್ಚುವ ಕನ್ನಡ ಪ್ರೇಕ್ಷಕರು ರಾಯರು ಬಂದರು ಮಾವನ ಮನೆಗೆ ಸಿನಿಮಾಗೆ ಎಷ್ಟು ಮಾರ್ಕ್ಸ್ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ವರ ಪಧಾರವೋ ಸಾವಧಾನ ಎಂಬ ಗುಜರಾತಿ ಸಿನೆಮಾ ಕನ್ನಡದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸಿನೆಮಾಗೆ ರಾಯರು ಬಂದರು ಮಾವನ ಮನೆಗೆ ಎಂದು ಮರು ನಾಮಕರಣ ಮಾಡಲಾಗಿದೆ. ಜುಲೈ 7ಕ್ಕೆ ಈ ಸಿನೆಮಾ ಬಿಡುಗಡೆಯಾಗಲಿದೆ.