ಉಡುಪಿ: ಪ್ರತಿಪಕ್ಷಗಳ ಹಾಗೂ ಕಾಂಗ್ರೆಸ್ ವಿರೋಧಿಗಳ ಅಪಪ್ರಚಾರದ ಹೊರತಾಗಿಯೂ ರಾಜ್ಯ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಯಶಸ್ಸನ್ನು ಕಂಡಿದೆ. ಇದು ರಾಜ್ಯದ ಆರ್ಥಿಕತೆಗೆ ಉತ್ತೇಜನವನ್ನು ನೀಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ಮಹಿಳೆಯರು ಸಬಲೀಕರಣಗೊಂಡಿದ್ದಾರೆ. ಯೋಜನೆ ನೇರವಾಗಿ ಜನರನ್ನು ತಲುಪುವುದರಿಂದ ಇದರಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲವಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು ಜನರ ಆದಾಯ ಹೆಚ್ಚಿಸುವ ಕಾರ್ಯಕ್ರಮವಾಗಿತ್ತು. ಇದರ ಮೂಲಕ ಪ್ರತಿ ವರ್ಷ ಕುಟುಂಬಕ್ಕೆ ಕನಿಷ್ಠ 82,000ರೂ.ಗಳ ಆದಾಯವನ್ನು ನೀಡುವ ಯೋಜನೆ ಇದಾಗಿತ್ತು. ಈ ಮೂಲಕ ಜನರ ಹಸಿವನ್ನು ನೀಗಿಸಿ ಅವರನ್ನು ಬಡತನದ ರೇಖೆಗಿಂತ ಮೇಲಕ್ಕೇತ್ತುವ ಕಾರ್ಯಕ್ರಮ ಇದಾಗಿದ್ದು, ಇದರಲ್ಲಿ ನಾವಿಂದು ಯಶಸ್ಸು ಸಾಧಿಸಿದ್ದೇವೆ ಎಂದರು.
ಕರ್ನಾಟಕದ ಈ ಬಾರಿಯ ಬಜೆಟ್ 4.9 ಲಕ್ಷ ಕೋಟಿ ರೂ.ಗಳದಾಗಿತ್ತು. ಇದರಲ್ಲಿ 56,000 ಕೋಟಿ ರೂ.ಗಳನ್ನು ಗ್ಯಾರಂಟಿಗೆ, 18,000 ಕೋಟಿ ರೂ.ಗಳನ್ನು ರೈತರಿಗೆ ವಿವಿಧ ರೂಪದಲ್ಲಿ, 20,000 ಕೋಟಿ ರೂ.ಗಳನ್ನು ಪೆನ್ಶನ್ ಸ್ಕೀಮ್ ಸೇರಿದಂತೆ ವಿವಿಧ ಯೋಜನೆಗಳಿಗೆ ಸೇರಿದಂತೆ ಸುಮಾರು ಒಂದು ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ. ಇನ್ನು ಒಂದು ಲಕ್ಷ ಕೋಟಿ ರೂ. ಸರಕಾರಿ ನೌಕರ ಸಂಬಳ ಹಾಗೂ ಇತರ ವೆಚ್ಚ ಗಳಿಗೆ ವ್ಯಯವಾದರೆ, ಉಳಿದ ಎರಡು ಲಕ್ಷ ಕೋಟಿ ರೂ. ರಾಜ್ಯದ ಅಭಿವೃದ್ಧಿಗೆ ಲಭ್ಯವಿದೆ ಎಂದವರು ವಿರೋಧ ಪಕ್ಷಗಳ ಆರೋಪಗಳಿಗೆ ಉತ್ತರಿಸಿದರು.
ಗ್ಯಾರಂಟಿ ಯೋಜನೆಯನ್ನು ಪ್ರಾರಂಭಿಸಿದಾಗ, ಬಿಟ್ಟಿ ಭಾಗ್ಯ, ಜನರನ್ನು ಸೋಮಾರಿಯಾಗಿಸುವ ಯೋಜನೆ ಎಂದೆಲ್ಲಾ ಟೀಕಿಸಲಾಗುತ್ತಿತ್ತು. ಮೂರು ತಿಂಗಳಲ್ಲಿ ಗ್ಯಾರಂಟಿ ಯೋಜನೆಯನ್ನು ವಿರೋಧಿಸಿ 158 ಲೇಖನಗಳು ಪ್ರಕಟಗೊಂಡಿದ್ದವು. ಆದರೆ ಇವೆಲ್ಲವೂ ಅಪಪ್ರಚಾರದ ಭಾಗ ಎಂಬುದನ್ನು ಈಗ ಜನತೆಗೆ ಮನದಟ್ಟಾಗಿದೆ ಎಂದು ಸೊರಕೆ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವಂತಾಗಿದೆ. ಎಲ್ಲಾ ಅಪಪ್ರಚಾರ ಗಳನ್ನೂ ಮೀರಿ ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿ, ದೇಶದ ಉಳಿದೆಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರ ಸರಕಾರಕ್ಕೆ ಮಾದರಿ ಯೋಜನೆಯಾಗಿವೆ ಎಂದು ಅವರು ತಿಳಿಸಿದರು.
ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಕಾಪು ಸಮಿತಿಯ ನವೀನ್‌ಚಂದ್ರ ಹಾಗೂ ಇತರರು ಉಪಸ್ಥಿತರಿದ್ದರು.












