ಕಾಮೆಟ್ C/2022 E3 (ZTF) ಅಥವಾ ಹಸಿರು ಬಣ್ಣದ ಧೂಮಕೇತುವು ರಾತ್ರಿ ಆಗಸದಲ್ಲಿ ಬುಧವಾರದಂದು ಕಂಡುಬಂದಿದೆ. ಅಮೇರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಪ್ರಕಾರ, ಧೂಮಕೇತು ಸುಮಾರು 50,000 ವರ್ಷಗಳ ನಂತರ ನಮ್ಮ ಗ್ರಹಕ್ಕೆ ಭೇಟಿ ನೀಡಿದೆ. ಪ್ರಪಂಚದಾದ್ಯಂತದ ನಕ್ಷತ್ರ ವೀಕ್ಷಕರು ಮತ್ತು ಖಗೋಳಶಾಸ್ತ್ರಜ್ಞರು ಧೂಮಕೇತುವನ್ನು ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಧೂಮಕೇತುವು ಭೂಮಿಯಿಂದ ಕೇವಲ 26 ಮಿಲಿಯನ್ ಮೈಲುಗಳಷ್ಟು (ಅಥವಾ 42 ಮಿಲಿಯನ್ ಕಿಲೋಮೀಟರ್) ದೂರದಿಂದ ಹಾದುಹೋಗಿದೆ.
ಕಳೆದ ಕೆಲವು ತಿಂಗಳಿನಿಂದ ಈ ಹಸಿರು ಧೂಮಕೇತು ಆಕಾಶದಲ್ಲಿದ್ದರೂ ಬುಧವಾರದಂದು ಸ್ಪಷ್ಟವಾಗಿ ಕಂಡುಬಂದಿದೆ. ಇಂತಹ ದೃಶ್ಯ ಮುಂದೆ ಲಕ್ಷಾಂತರ ವರ್ಷಗಳವರೆಗೆ ಕಾಣಸಿಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಮಂಜುಗಡ್ಡೆ, ಬಂಡೆ, ಧೂಳು ಮಿಶ್ರಿತ ಈ ಧೂಮಕೇತುಗಳು ಸೂರ್ಯನ ಹತ್ತಿರದಿಂದ ಹಾಯ್ದುಹೋಗುವಾಗ ಅತ್ಯಂತ ಮನಮೋಹಕವಾಗಿ ಕಾಣುತ್ತವೆ. ಸೂರ್ಯನ ಶಾಖಕ್ಕೆ ಧೂಮಕೇತುವಿನಲ್ಲಿರುವ ಇಂಗಾಲದ ಅಣುಗಳಿಂದಾಗಿ ಈ ಹಸಿರು ಬಣ್ಣ ಉತ್ಪತ್ತಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಶುಭ್ರ ಆಗಸವಿದ್ದಲ್ಲಿ ದೂರದರ್ಶಕ ಮತ್ತು ದುರ್ಬೀನುಗಳ ಸಹಾಯದಿಂದ ಈ ಧೂಮಕೇತುವನ್ನು ನೋಡಬಹುದು ಎನ್ನಲಾಗಿದೆ.
ಪಶ್ಚಿಮ ಬಂಗಾಳ, ಒಡಿಶಾ, ಲಡಾಖ್ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಭಾರತದ ಹಲವಾರು ಭಾಗಗಳು ಈ ಆಕಾಶ ಘಟನೆಯನ್ನು ವೀಕ್ಷಿಸಲು ಅವಕಾಶವನ್ನು ಹೊಂದಿವೆ.