ನೋಯ್ಡಾ: ಭಾನುವಾರದಂದು ನೋಯ್ಡಾದಲ್ಲಿ ಕೆಡವಲಾದ ಸೂಪರ್ಟೆಕ್ ಅವಳಿ ಕಟ್ಟಡಗಳ ಜಾಗದಲ್ಲಿ ಗ್ರೀನ್ ಬೆಲ್ಟ್ ಯೋಜನೆ ಬರಲಿದೆ ಎನ್ನಲಾಗಿದೆ. ನೋಯ್ಡಾದಲ್ಲಿ ಎಮರಾಲ್ಡ್ ಕೋರ್ಟ್ ಯೋಜನೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಕೆಡವಿದ್ದರಿಂದ ಕಟ್ಟಡ ನಿರ್ಮಾತೃ ಸೂಪರ್ಟೆಕ್ಗೆ ಸುಮಾರು 1,000 ಕೋಟಿ ರೂಪಾಯಿ ನಷ್ಟವಾಗಿದೆ. 70 ಕೋಟಿಯಲ್ಲಿ ನಿರ್ಮಾಣವಾದ ಕಟ್ಟಡವನ್ನು ನೆಲಸಮಗೊಳಿಸಲು ಸುಮಾರು 21 ಕೋಟಿ ರೂ. ವೆಚ್ಚವಾಗಿದೆ. ಕಟ್ಟಡ ನಿರ್ಮಾಣಕ್ಕೆ 13 ವರ್ಷಗಳು ತಗಲಿದ್ದರೆ ಕೇವಲ 9 ಸೆಕೆಂಡ್ ಗಳಲ್ಲಿ 32 ಮತು 29 ಮಹಡಿಯ ಕಟ್ಟಡಗಳನ್ನು ಕೆಡವಲಾಗಿದೆ.
ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸೆಯಾನೆ ನೋಯ್ಡಾದ ಸೆಕ್ಟರ್ 93ಎ ನಲ್ಲಿದ್ದವು. ಕಟ್ಟಡಗಳಲ್ಲಿ ಒಂದು 103 ಮೀಟರ್ ಎತ್ತರವನ್ನು ಹೊಂದಿದ್ದರೆ, ಇನ್ನೊಂದು 97 ಮೀಟರ್ ಎತ್ತರವಿತ್ತು. ಕೆಡವಲು, ಸುಮಾರು 3,700 ಕೆಜಿ ಸ್ಫೋಟಕಗಳನ್ನು ಪಲ್ವಾಲ್ (ಹರಿಯಾಣ) ನಿಂದ ತರಲಾಯಿತು. ಇದು ಡೈನಮೈಟ್, ಎಮಲ್ಷನ್ ಮತ್ತು ಪ್ಲಾಸ್ಟಿಕ್ ಸ್ಫೋಟಕಗಳ ಮಿಶ್ರಣವಾಗಿತ್ತು. ಚೇತನ್ ದತ್ತಾ ಎನ್ನುವ ಇಂಜಿನಿಯರ್ ಕಟ್ಟಡ ನೆಲಸಮಗೊಳಿಸುವ ತಂಡದ ನೇತೃತ್ವ ವಹಿಸಿದ್ದರು. ವಿದೇಶದಿಂದ ಬಂದ 10 ತಜ್ಞರು ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿದ್ದು ನಿರೀಕ್ಷಣೆ ನಡೆಸುತ್ತಿದ್ದರು. 40 ವರ್ಷಗಳ ಅನುಭವವಿರುವ ಆಫ್ರಿಕಾದ ಜೆಟ್ ಡೆಮೋಲಿಷನ್ ಕಂಪನಿಯ ನಿರ್ದೇಶಕ ಜೋ ಬ್ರಿಕ್ ಮೆನ್ ಕಟ್ಟಡ ಕೆಡಹುವ ಯೋಜನೆಯ ರೂಪು ರೇಷೆಗಳನ್ನು ತಯಾರಿಸಿದ್ದರು. ಕಟ್ಟಡಗಳು ನೆಲಸಮವಾದಾಗ ಅಕ್ಕ ಪಕ್ಕದ ಯಾವುದೇ ಮನೆಗಳಿಗೂ ಕಿಂಚಿತ್ತೂ ಹಾನಿಯಾಗಿಲ್ಲ.
ಪ್ರಕರಣದ ಹಿನ್ನೆಲೆ:
ಎಮರಾಲ್ಡ್ ಕೋರ್ಟ್ ಯೋಜನೆಯ ಅವಳಿ ಕಟ್ಟಡಗಳನ್ನು 2004 ರಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ನೋಯ್ಡಾ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳು ಮತ್ತು ಸೂಪರ್ ಟೆಕ್ ಕಂಪನಿಯ ಕೂಟಾಟದಿಂದ 2012 ರವರೆಗೂ ಯೋಜನೆಗಳಲ್ಲಿ ಹಲವಾರು ಬದಲಾವಣೆಗಳನ್ನು ಅಕ್ರಮವಾಗಿ ಮಾಡುತ್ತಾ ಹೋಗಲಾಯಿತು. 2012 ರಲ್ಲಿ ಕಡೆಯ ಬಾರಿಗೆ ನೋಯ್ಡಾ ಪ್ರಾಧಿಕಾರವು ಹೊಸ ಯೋಜನೆಯನ್ನು ಪರಿಶೀಲಿಸಿ, ಇದರಲ್ಲಿ ಅವಳಿ ಗೋಪುರಗಳ ಎತ್ತರವನ್ನು 40 ಮಹಡಿಗಳಿಗೆ ನಿಗದಿಪಡಿಸಿತು.
ಆದರೆ ಈ ಮಧ್ಯೆ ಈ ಅವಳಿ ಕಟ್ಟಡ ನಿರ್ಮಾಣಗಳಿಗೆ ಎಮರಾಲ್ಡ್ ಕೋರ್ಟ್ ನಿವಾಸಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು ಮತ್ತು ಪ್ರಕರಣವು ಕೋರ್ಟ್ ಮೆಟ್ಟಿಲೇರಿತ್ತು. ಹತ್ತು ವರ್ಷಗಳ ಸುದೀರ್ಘ ಹೋರಾಟದ ಬಳಿಕ ಆಗಸ್ಟ್ 2021 ರಲ್ಲಿ, ಕಟ್ಟಡಗಳ ನಿರ್ಮಾಣವು ಕನಿಷ್ಟ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಅವುಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಆದೇಶಿಸಿತು. ನ್ಯಾಯಾಲಯದ ಪ್ರಕಾರ, ಉತ್ತರ ಪ್ರದೇಶ ಅಪಾರ್ಟ್ಮೆಂಟ್ ಕಾಯ್ದೆಯಡಿ ಅಗತ್ಯವಿರುವಂತೆ ಅಕ್ಕ ಪಕ್ಕದ ಫ್ಲ್ಯಾಟ್ ಮಾಲೀಕರ ಒಪ್ಪಿಗೆಯನ್ನು ತೆಗೆದುಕೊಳ್ಳದೆ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಸೂಪರ್ಟೆಕ್ ಮತ್ತು ನೋಯ್ಡಾ ಪ್ರಾಧಿಕಾರದ ಅಕ್ರಮ ಕಾರ್ಯವನ್ನು ಮನಗಂಡ ನ್ಯಾಯಾಲಯವು ನೋಯ್ಡಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕಟ್ಟಡಗಳನ್ನು ಸ್ವಂತ ವೆಚ್ಚದಲ್ಲಿ ಕೆಡವಲು ಸೂಪರ್ಟೆಕ್ಗೆ ಆದೇಶಿಸಿದೆ. ಮನೆ ಖರೀದಿದಾರರಿಂದ ಹಲವಾರು ಅರ್ಜಿಗಳ ನಂತರ ಸುಪ್ರೀಂ ಕೋರ್ಟ್ನಿಂದ ಈ ತೀರ್ಪು ಹೊರ ಬಂದಿದೆ.
ಕಟ್ಟಡಗಳನ್ನು ಕೆಡವಿದ ನಂತರ ಎಮರಾಲ್ಡ್ ಗ್ರೀನ್ ಪರಿಸರದ ನಿವಾಸಿಗಳಲ್ಲಿ ಸಂತಸ ಮನೆ ಮಾಡಿದೆ. ಕೆಡವಲಾದ ಕಟ್ಟಡದ ಜಾಗದಲ್ಲಿ ಸ್ವಚ್ಛತಾ ಕಾರ್ಯಗಳು ಜಾರಿಯಲ್ಲಿದ್ದು, ಕಟ್ಟಡ ಕೆಡವಿದ್ದರಿಂದ ಉತ್ಪತ್ತಿಯಾದ ಧೂಳಿನಿಂದ ತುಂಬಿದ ಪರಿಸರವು ಸಾಮಾನ್ಯ ಸ್ಥಿತಿಗೆ ಬರಬೇಕಾದರೆ ಇನ್ನೂ ಮೂರು ನಾಲ್ಕು ದಿನಗಳು ಬೇಕಾಗಬಹುದು. ಅಲ್ಲದೆ, ಸಂಪೂರ್ಣ ಪರಿಸರ ಸ್ವಚ್ಛವಾಗಲು ಇನ್ನೂ ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಕಟ್ಟಡ ಕೆಡಹುವ ಸಂದರ್ಭದಲ್ಲಿ ಅಕ್ಕ ಪಕ್ಕದ ಮನೆಗಳಲ್ಲಿದ್ದ 7000 ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಈಗ ಅವರೆಲ್ಲರೂ ತಮ್ಮ ತಮ್ಮ ಮನೆಗಳತ್ತ ತೆರಳುತ್ತಿದ್ದಾರೆ.
Noida, UP | We filed a petition in High Court in 2012. We're very happy to have won this battle of 10 yrs. Long-term benefits of demolition will be seen in 3 months: UBS Teotia, RWA Pres, Emerald Court & petitioner in Twin Towers case, on demolition of #SupertechTwinTowers pic.twitter.com/lZ102XC753
— ANI (@ANI) August 28, 2022
ಕಟ್ಟಡಗಳನ್ನು ಕೆಡವಿರುವುದರಿಂದ ಉತ್ತಮ ಪ್ರಯೋಜನಗಳು ಮುಂದಿನ ದಿನಗಳಲ್ಲಿ ಕಂಡುಬರಲಿವೆ ಎಂದು ಅರ್ಜಿದಾರರು ಹೇಳಿದ್ದಾರೆ.
ವರದಿ: ಝೀ ನ್ಯೂಸ್