ವೀಕೆಂಡ್ ಕರ್ಪ್ಯೂಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಬೆಂಬಲ

ಉಡುಪಿ: ಕೋವಿಡ್-19 ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿ, ಕುಂದಾಪುರ, ಕಾರ್ಕಳ ನಗರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಜನಜೀವನ ಸ್ತಬ್ಧಗೊಂಡಿದೆ. ಸಾರ್ವಜನಿಕರು ಮನೆಯಿಂದ ಹೊರಬಾರದೇ ಮನೆಗಳಲ್ಲೇ ಲಾಕ್ ಆಗಿದ್ದಾರೆ. ವಾಹನ ಸಂಚಾರವೂ ಸಂಪೂರ್ಣ ಬಂದ್ ಆಗಿದ್ದು, ಶನಿವಾರ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯ ಬಸ್ ಗಳು ಸಂಚಾರ ನಡೆಸಿದ್ದು, ಉಳಿದಂತೆ ಬಹುತೇಕ ಬಸ್ ಗಳು ಡಿಪೋಗಳಿಂದ ಹೊರಬಂದಿಲ್ಲ.

ಕುಂದಾಪುರ ಪೇಟೆ

ಉಡುಪಿ ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದು, ಜನಸಂಚಾರ ವಾಹನಗಳ ಸಂಚಾರ ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ.
ಇಂದು ಬೆಳಿಗ್ಗೆ6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸಿದವು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಜನಸಂಚಾರ, ವಾಹನ ಸಂಚಾರ ಸ್ತಬ್ಧಗೊಂಡಿದ್ದು, ಆಸ್ಪತ್ರೆ, ಮೆಡಿಕಲ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಖಾಸುಮ್ಮನೆ ಓಡಾಡುವ ಜನರನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ. ತುರ್ತು ಸೇವೆಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.