ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಅರಣ್ಯಾಧಿಕಾರಿಗಳು ಮಂಗಳವಾರ ಗಜಪಡೆಗೆ ಪೂಜೆ ನೆರವೇರಿಸಿದರು. ಇಲ್ಲಿನ ಅರಣ್ಯ ಭವನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಗಜಪೂಜೆ ನಂತರ ನೈವೇದ್ಯ ಅರ್ಪಣೆ ಮಾಡಲಾಯಿತು. ಅರಣ್ಯಾಧಿಕಾರಿಗಳು ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಗಜಪಡೆಗೆ ಪೂಜೆ, ಅರಮನೆಗೆ ಅದ್ಧೂರಿ ಸ್ವಾಗತ…ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ಗಜಪಡೆಗೆ ಪೂಜೆ ನೆವೇರಿಸಲಾಯಿತು. ನಂತರ ಕ್ಯಾಪ್ಟನ್ ಅಭಿಮನ್ಯು ಹಾಗೂ ಗಜಪಡೆಗೆ ಅರಮನೆಗೆ ಅದ್ಧೂರಿ ಸ್ವಾಗತ ಕೋರಲಾಯಿತು
ಕಾಲ್ನಡಿಗೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಅಲಂಕಾರಗೊಂಡ ಗಜಪಡೆಯನ್ನು ಜನ ಕಣ್ತುಂಬಿಕೊಂಡರು. ಕಳೆದ ಸೆಪ್ಟೆಂಬರ್ 1ರಂದು ಈ ಗಜಪಡೆ ಹುಣಸೂರಿನ ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿದ್ದವು. ಅರಣ್ಯ ಭವನದಲ್ಲಿ ಆನೆಗಳು ವಾಸ್ತವ್ಯ ಹೂಡಿದ್ದವು. ಇಂದು (ಮಂಗಳವಾರ) ಅರಣ್ಯ ಭವನದಿಂದ ಮೈಸೂರು ಅರಮನೆಗೆ ಬಂದವು. ಮಧ್ಯಾಹ್ನ 12.01 ರಿಂದ 12.51 ಸಮಯದ ಅಭಿಜನ್ ಲಗ್ನದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿಯು ಗಜಪಡೆಗೆ ಅದ್ಧೂರಿಯಾಗಿ ಸ್ವಾಗತಿಸಿದರು.
ವಾದ್ಯಗೋಷ್ಠಿ ಮೂಲಕ ಅರಮನೆಯತ್ತ ಗಜಪಡೆ ಕಾಲ್ನಡಿಗೆಯಲ್ಲಿ ತೆರಳಿತು. ಕ್ಯಾಪ್ಟನ್ ಅಭಿಮನ್ಯು ಹಾಗೂ ಗಜಪಡೆಯು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆಗಮಿಸಿದ ವೇಳೆಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಜನಪದ ಕಲಾ ತಂಡಗಳೊಂದಿಗೆ ನಗರದ ಅಶೋಕಪುರಂನ ಅರಣ್ಯ ಭವನದಿಂದ ಅರಮನೆಗೆ ಆಗಮಿಸಿದವು.
ಅರ್ಜುನ ಗೈರು: ಗಜಪಯಣದ ಮೂಲಕ ಅರಣ್ಯ ಭವನಕ್ಕೆ ಆಗಮಿಸಿದ ಅರ್ಜುನ ಆನೆ, ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದು, ನಿನ್ನೆ (ಸೋಮವಾರ) ಎಚ್.ಡಿ. ಕೋಟೆಯ ಕಲ್ಲ ಹಟ್ಟಿ ಗ್ರಾಮದ ಬಳಿ ಬಾಲಕನನ್ನು ಬಲಿ ಪಡೆದ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿದ್ದು, ಆದ್ದರಿಂದ ಸಾಂಪ್ರದಾಯಿಕ ಗಜಪಡೆಯ ಪೂಜಾ ಕಾರ್ಯಕ್ಕೆ ಅರ್ಜುನ ಆನೆ ಗೈರಾಗಿತ್ತು.
ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸ್ವಾಗತ: ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಗೆ ಪ್ರವೇಶ ಮಾಡುವ ಮುನ್ನ ಜಯಮಾರ್ತಾಂಡ ದ್ವಾರದ ಬಳಿ ಉಸ್ತುವಾರಿ ಸಚಿವ ಡಾ.ಎಚ್ ಸಿ.ಮಹಾದೇವಪ್ಪ, ಅರಣ್ಯಾಧಿಕಾರಿಗಳು ಹಾಗೂ ಇತರರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ನಂತರ ಗಜಪಡೆ ಅರಮನೆಯ ಮುಂಭಾಗದಲ್ಲಿ ಪೂಜೆ ಸಲ್ಲಿಸಿ, ಆನೆ ಮಾವುತರು ಮತ್ತು ಕಾವಾಡಿಗಳಿಗೆ ಜಿಲ್ಲಾಡಳಿತದ ಕಡೆಯಿಂದ ಕಿಟ್ ಅನ್ನು ವಿತರಿಸಲಾಯಿತು. 15ಕ್ಕೂ ಹೆಚ್ಚು ಕಲಾ ತಂಡಗಳು ಗಜಪಡೆಯ ಅದ್ದೂರಿ ಸ್ವಾಗತಿಸಿದವು.
ಅರಮನೆ ನಗರಿ ಮೈಸೂರು ಪ್ರವಾಸೋದ್ಯಮವನ್ನು ಹೆಚ್ಚು ನೆಚ್ಚಿಕೊಂಂಡಿದೆ. ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ದಸರಾ ಸಂದರ್ಭದಲ್ಲಿ ಜಂಬೂ ಸವಾರಿ ನೋಡಲು ಕೋಟ್ಯಾಂತರ ಜನರು ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಾರೆ. ಕೋವಿಡ್ ನಂತರ ದಸರಾ ಆಚರಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಅಂಬಾರಿ ಹೊರಲಿರುವ ಅಭಿಮನ್ಯು : ಕಳೆದ ಕೆಲವು ದಿನಗಳ ಹಿಂದೆ ಗಜಪಯಣದ ಮೂಲಕ ಹೋಗುವ ಆನೆಗಳು ಮೈಸೂರಿಗೆ ಬಂದಿದ್ದವು. ಒಂದೂವರೆ ತಿಂಗಳು ಆನೆಗಳಿಗೆ ತಾಲೀಮು ನಡೆಯಲಿದೆ. ಕಳೆದ ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆ, ಈ ಬಾರಿಯೂ ಅಂಬಾರಿ ಹೊರಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದರು.