ಚಿತ್ರದುರ್ಗ-ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ(ರಿ)ಇವರ ಆಶ್ರಯದಲ್ಲಿ,ಅಧ್ಯಕ್ಷರಾದ ಎಮ್.ಶಂಕರಮೂರ್ತಿ ಇವರ ಸಾರಥ್ಯದಲ್ಲಿ ಚಿತ್ರದುರ್ಗ ಹಳೆ ಮಾಧ್ಯಮಿಕ ಶಾಲೆ ಮೈದಾನದಲ್ಲಿ ನಡೆದ ವಿಶ್ವಕರ್ಮ ಪ್ರೀಮಿಯರ್ ಲೀಗ್ VPL-2026 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಕಾಶ್ ಆಚಾರ್ ನೇಜಾರು ಮಾಲೀಕತ್ವದ ಗುರುಗಣೇಶ್ ನೇಜಾರು ಚಾಂಪಿಯನ್ಸ್ ಆಗಿ ಮೂಡಿಬಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಲೀಗ್ ಹಂತದ ಹೋರಾಟದ ಬಳಿಕ ಉಪಾಂತ್ಯ ಪಂದ್ಯದಲ್ಲಿ ಕ್ರಮವಾಗಿ ಗುರುಗಣೇಶ್ ನೇಜಾರು-ರತನ್ ರಾಕರ್ಸ್ ಕುಂದಾಪುರ ತಂಡವನ್ನು,ಕಗಿಟಿಸ್ ಬೆಂಗಳೂರು-ಮಾಣಿಕ್ಯ ವಿವಿಸಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಗಿಟೀಸ್ ಬೆಂಗಳೂರು ನಿಗದಿತ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 40 ರನ್
ಕಲೆ ಹಾಕಿತ್ತು.
ಇದಕ್ಕುತ್ತರವಾಗಿ ಗುರುಗಣೇಶ್ ನೇಜಾರು ತಂಡದ ಆರಂಭಿಕ ಆಟಗಾರರಾದ ಗೌರೀಶ್ 24 ಮತ್ತು ಪ್ರಸಿದ್ಧ್ 11 ಭರ್ಜರಿ ಆಟದ ನೆರವಿನಿಂದ ಕೇವಲ 3 ಓವರ್ ನಲ್ಲಿ ಗುರಿ ತಲುಪಿ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿತು.
ಚಾಂಪಿಯನ್ಸ್ ಗುರುಗಣೇಶ್
2 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿ, ಕಗಿಟೀಸ್ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿ,
ತೃತೀಯ ರತನ್ ರಾಕರ್ಸ್ ಹಾಗೂ ಚತುರ್ಥ ಬಹುಮಾನ ಮಾಣಿಕ್ಯ ವಿ.ವಿ.ಸಿ ಕುಂದಾಪುರ ಪಡೆದುಕೊಂಡರು.
ಫೈನಲ್ ಪಂದ್ಯಶ್ರೇಷ್ಟ ಗೌರೀಶ್ ಆಚಾರ್ಯ,ಟೂರ್ನಿಯ ಬೆಸ್ಟ್ ಬ್ಯಾಟರ್ ಪ್ರಸಿದ್ಧ್,ಬೆಸ್ಟ್ ಬೌಲರ್ ಸೂರಜ್,ಉದಯೋನ್ಮುಖ ಆಟಗಾರನಾಗಿ ಕಗಿಟೀಸ್ ನ ಧನುಷ್ ಪಡೆದುಕೊಂಡರು.
ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ನೀಡಲಾದ ಹೊಂಡಾ ಶೈನ್ ಬೈಕ್ ಅರ್ಹವಾಗಿ ರತನ್ ರಾಕರ್ಸ್ ನ ಮನೋಜ್ ಶಂಕರನಾರಾಯಣ ಪಾಲಾಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ
“ಕ್ರೀಡೆಯ ಮೂಲಕ ವಿಶ್ವಕರ್ಮ ಜನಾಂಗದವರು ಸಂಘಟನೆಯಾಗಲು ವಿನೂತನ ಹೆಜ್ಜೆಯಿಟ್ಟಿರುವುದು ಅರ್ಥಪೂರ್ಣವಾಗಿದೆ ಎಂದರು.
ಕಾರ್ಪೆಂಟರ್, ಆಭರಣ ತಯಾರಿಕೆ, ಕುಲುಮೆ ಕೆಲಸ, ಶಿಲ್ಪಕಲೆ, ಲೋಹಶಿಲ್ಪ ದೇವರ ವಿಗ್ರಹಗಳ ತಯಾರಿಕೆ, ರಾಜ ಮಹಾರಾಜರು ಯುದ್ದದ ಸಂದರ್ಭಗಳಲ್ಲಿ ಬಳಸುತ್ತಿದ್ದ ಕತ್ತಿ ಗುರಾಣಿಗಳು ಹಾಗೂ ಡ್ಯಾಂಗಳ ಇಂಟರ್ ಲಾಕ್ ವ್ಯವಸ್ಥೆಯಲ್ಲಿ ವಿಶ್ವಕರ್ಮರ ಕೊಡುಗೆಯಿದೆ. ಜಯಂತಿ ಪೂಜೆಗಳಲ್ಲಿ ಒಂದಾಗಿ ಶಕ್ತಿ ಪ್ರದರ್ಶಿಸುವುದಕ್ಕಿಂತ ಕ್ರೀಡೆ ಮೂಲಕ ಸಂಘಟನೆಯತ್ತ ಗಮನ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಕಾಯಕ ವರ್ಗದ ಜೊತೆ ನಾನು ಸದಾ ಇರುತ್ತೇನೆಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಮಾತನಾಡಿ ರಾಜ್ಯದಲ್ಲಿಯೇ ಹಿಂದುಳಿದವರಲ್ಲಿ ಎರಡನೆ ಸ್ಥಾನದಲ್ಲಿದ್ದೇವೆಂದು ಹೇಳಿಕೊಳ್ಳುವ ನೀವುಗಳು ಅಲ್ಪಸಂಖ್ಯಾತೆಂದುಕೊಳ್ಳಬೇಡಿ. ನಿಮ್ಮ ಸಂಘಟನೆ ಬಲವಾಗಿದೆ. ರಾಜ್ಯ ಮಟ್ಟದ ವಿಶ್ವಕರ್ಮ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಮೂಲಕ ವಿಶ್ವಕರ್ಮ ಜನಾಂಗದವರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ, ಹಾಸ್ಟೆಲ್ ಸೌಲಭ್ಯಗಳಿಗಾಗಿ ಎರಡು ಎಕರೆ ಮತ್ತು ಧಾರ್ಮಿಕ ಆಧ್ಯಾತ್ಮಿಕ ಸಮಾರಂಭಗಳಿಗೆ ಕಟ್ಟವಿಲ್ಲದ ಕಾರಣ ನಾಲ್ಕು ಎಕರೆ ಭೂಮಿ ನೀಡುವಂತೆ ವಿಶ್ವ ಕರ್ಮ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಸಚಿವ ಟಿ.ರಘುಮೂರ್ತಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಜೊತೆ ಚರ್ಚಿಸಿ ಭೂಮಿ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ವಿಶ್ವಕರ್ಮ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಶಂಕರ್ಮೂರ್ತಿ ಪ್ರಧಾನ ಕಾರ್ಯದರ್ಶಿ ಶ್ಯಾಮಪ್ರಸಾದ್, ಉಪಾಧ್ಯಕ್ಷರುಗಳಾದ ಶ್ರೀನಿವಾಸ್, ಸಂತೋಷ್, ಶ್ರೀನಿವಾಸಾಚಾರ್, ನಾರಾಯಣಾಚಾರ್, ವಿಶ್ವಕರ್ಮ ಸಮಾಜದ ಸಿ.ಕುಮಾರ್ ಉಮೇಶ್ಕುಮಾರ್ ಬಿ.ಎಂ. ಹೈಕೋರ್ಟ್ ನ್ಯಾಯವಾದಿ ರುದ್ರಾಚಾರ್, ಡಿ.ವೆಂಕಟೇಶಾಚಾರ್, ಪ್ರವೀಣ್ಕುಮಾರ್, ಆರ್.ಡಿ.ಸಂಜಯ್, ಸ್ವಾಮಿನಾಥನ್ ಇವರುಗಳು ವೇದಿಕೆಯಲ್ಲಿದ್ದರು.















