ಉಡುಪಿ: ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ “ಶ್ರೀ ದುರ್ಗಾ ಸಹಕಾರ ಸೌಧ”ದ ಅದ್ದೂರಿ ಉದ್ಘಾಟನೆ.

ಪರ್ಕಳ: ಪರ್ಕಳದ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪರ್ಕಳದ ನೂತನ ಕಟ್ಟಡ “ಶ್ರೀ ದುರ್ಗಾ ಸಹಕಾರ ಸೌಧ”ದ ಉದ್ಘಾಟನೆ ಇಂದು(ಅ.12)ರಂದು ಅದ್ದೂರಿಯಾಗಿ ನಡೆಯಿತು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಕಟ್ಟಡ ಉದ್ಘಾಟಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ, ಉಡುಪಿಯ ಶಾಸಕರಾದ ಯಶ್ಪಾಲ್ ಸುವರ್ಣ ಉಡುಪಿಯ ಜಿಲ್ಲೆಯ ಸಹಕಾರಿ ಸೊಸೈಟಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಡಿಮೆ ಇಲ್ಲ ಎನ್ನುವಂತೆ ಸೇವೆಗಳನ್ನು ನೀಡುತ್ತಿದೆ. ದೇಶದ ಆರ್ಥಿಕತೆಗೂ ದೊಡ್ಡ ಮಟ್ಟಿನ ಸಹಕಾರವನ್ನು ಸಹಕಾರಿ ಸಂಘಗಳು ನೀಡಿದೆ. ಪರ್ಕಳದ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಜನರಿಗೆ ಅತ್ಯುತ್ತಮ ಸೇವೆಗಳನ್ನು ನೀಡುವ ಮೂಲಕ ಸ್ಪಂದಿಸುತ್ತ ಬಂದಿದೆ. ಮಾತ್ರವಲ್ಲ ಸಮಾಜಮುಖಿಯಾಗಿಯೂ ಸಾಧನೆ ಮಾಡಿದೆ ಎಂದರು.

ಸಹಕಾರಿ ವ್ಯವಸ್ಥೆಗಳು ಸ್ಥಳೀಯವಾಗಿ ಮಾತ್ರ ಬೆಳೆಯುತ್ತಿಲ್ಲ, ದೇಶಾದ್ಯಂತ ಸಹಕಾರಿ ಸಂಘಗಳು ಇಂದು ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಸಹಕಾರಿ ಬ್ಯಾಂಕುಗಳ ಬಗ್ಗೆ ಜನ ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ. ಸಹಕಾರಿ ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯ ಕೊಡುಗೆ ದೊಡ್ಡದಿದೆ. ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕೊಡುಗೆಯೂ ಇಲ್ಲಿ ಸೇರಿದೆ. ಮುಂದೆ ಸಂಸ್ಥೆ ಇನ್ನಷ್ಟು ಯಶಸ್ಸು ಗಳಿಸಲಿ ಎಂದರು .

ಸೊಸೈಟಿಯ ಯಶಸ್ಸು ಬೇರೆ ಸಂಸ್ಥೆಗಳಿಗೆ ಮಾದರಿ: ರಘುಪತಿ ಭಟ್

ಮಾಜಿ ಶಾಸಕರಾದ ಕೆ. ರಘುಪತಿ ಭಟ್ ಮಾತನಾಡಿ, ಸಹಕಾರಿ ವ್ಯವಸ್ಥೆ ಒಂದು ನಂಬಿಕಸ್ಥ ವ್ಯವಸ್ಥೆಯಾಗಿದೆ. ಒಂದು ಸಂಸ್ಥೆ ಬಲಾಡ್ಯವಾದರೆ ಅದರ ಪ್ರತಿಫಲ ಸಮಾಜಕ್ಕೆ ಸಿಗುತ್ತದೆ. ಉಡುಪಿಯ ಬೆಳವಣಿಗೆಗೆ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಸ್ಪೂರ್ತಿಯಾಗಿದೆ. ಒಂದು ಸಹಕಾರಿ ಸಂಸ್ಥೆ ಯಶಸ್ವಿಯಾದರೆ ಅದು ಬೇರೆ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗುತ್ತದೆ ಎಂದರು.

ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು: ಗುರ್ಮೆ ಸುರೇಶ್ ಶೆಟ್ಟಿ

ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ,ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು ಸಹಕಾರಿ ಸಂಸ್ಥೆ.ಆ ವಿಶ್ವಾಸಾರ್ಹತೆಯನ್ನು ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಾಧಿಸಿದೆ.ಇದೊಂದು ಸಾಹಸವೇ ಸರಿ. ಸಂಸ್ಥೆಗೆ ಇನ್ನಷ್ಟು ಸಾಹಸ ಮತ್ತು ಸಾಧನೆಗಳನ್ನು ಮಾಡುವಂತಾಗಲಿ ಎಂದರು.

ಗ್ರಾಮೀಣ ಭಾಗದ ಜನರಿಗೆ ಸ್ಪಂದಿಸಿದ ಸಂಸ್ಥೆ: ಜಯಕರ ಶೆಟ್ಟಿ ಇಂದ್ರಾಳಿ

ಜಿಲ್ಲಾ ಸಹಕಾರಿ ಯೂನಿಯನ್ ರಿ., ಉಡುಪಿಯ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಎಲ್ಲಾ ವಾಣಿಜ್ಯ ಬ್ಯಾಂಕ್ ಗಳನ್ನು ಹಿಂದಿಕ್ಕಿ ಅತ್ಯುತ್ತಮ ಸೇವೆ ನೀಡಿದ ಸಾಧನೆ ಸಹಕಾರಿ ಕ್ಷೇತ್ರದ್ದು. ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ಅತ್ಯುತ್ತಮ ಸೇವೆ ನೀಡಿದ ಸಾಧನೆ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯದ್ದು. ಈ ಸಂಸ್ಥೆ ಸದಸ್ಯರೆಲ್ಲರ ಸಂಸ್ಥೆಯಾಗಿದೆ. ಕೇವಲ ಆರ್ಥಿಕ ವ್ಯವಹಾರ ಮಾತ್ರವಲ್ಲ ಇನ್ನಷ್ಟು ಸ್ಪರ್ಧಾತ್ಮಕ ಕ್ಷೇತ್ರಗಳಿಗೆ ಉತ್ತೇಜನ ನೀಡುವ ವ್ಯವಹಾರವನ್ನು ಕೂಡ ಸಹಕಾರಿ ಕ್ಷೇತ್ರದಲ್ಲಿ ಮಾಡುವ ಅವಕಾಶವಿದೆ ಎಂದರು. ಸಹಕಾರಿ ಕ್ಷೇತ್ರಕ್ಕೆ ಉನ್ನತ ಕೊಡುಗೆ ನೀಡಿದ ಸಂಸ್ಥೆಯನ್ನು ಶ್ಲಾಘಿಸಿದರು.

ಹೊಸ ಕಟ್ಟಡ ಸರ್ವ ಸದಸ್ಯರ ಆಸ್ತಿ: ಅಶೋಕ್ ಕಾಮತ್ ಕೊಡಂಗೆ

ಅಧ್ಯಕ್ಷತೆಯನ್ನು ವಹಿಸಿದ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ ಮಾತನಾಡಿ, ನಮ್ಮ ಸ್ವಂತ ನಿಧಿಯಲ್ಲಿಯೇ ನಿರ್ಮಿಸಿದ ಕಟ್ಟಡವನ್ನು ಇಂದು ಲೋಕಾರ್ಪಣೆಗೊಳಿಸಿದ್ದೇವೆ. ಇದು ನಮ್ಮೆಲ್ಲರ ಸದಸ್ಯರ ಸ್ವಂತ ಆಸ್ತಿಯಾಗಿದೆ. ಸಂಸ್ಥೆಯಿಂದ ಸಾಕಷ್ಟು ಸಮಾಜಮುಖಿ ಕಾರ್ಯವನ್ನು ಕೂಡ ಮಾಡಿದ್ದೇವೆ. ಇದೆಲ್ಲಾ ಸದಸ್ಯರು, ಊರ ಸಹಕಾರದಿಂದ ಸಾಧ್ಯವಾಗಿದೆ. ಮುಂದೆಯೂ ಸಂಸ್ಥೆಗೆ ಇನ್ನಷ್ಟು ಸಾಧಿಸುವ ಕನಸುಗಳಿವೆ. ಅವುಗಳನ್ನು ಭವಿಷ್ಯದಲ್ಲಿ ಸಾಧಿಸುತ್ತೇವೆ ಎಲ್ಲರ ಸಹಕಾರವೂ ಸಂಸ್ಥೆಗೆ ಅತ್ಯಗತ್ಯ ಎಂದರು.

ಉಡುಪಿ ಜಿಲ್ಲೆಯ ಮಾದರಿ ಸಹಕಾರಿ ಸೊಸೈಟಿ: ನಿತ್ಯಾನಂದ ನಾಯಕ್, ನರಸಿಂಗೆ
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ನಿತ್ಯಾನಂದ ನಾಯಕ್, ನರಸಿಂಗೆ ಪ್ರಾಸ್ತಾವಿಕಾಗಿ ಮಾತನಾಡಿ, ಪ್ರಾರಂಭದಲ್ಲಿ ಮೂರು ಲಕ್ಷ ರೂ ಡೆಪಾಸಿಟ್ ನೊಂದಿಗೆ ಆರಂಭಗೊಂಡ ಪರ್ಕಳದ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇಂದು,ರೂ160 ಕೋಟಿ ಡೆಪಾಸಿಟ್ ಗೆ ಬಂದು ತಲುಪಿದೆ. ಉಡುಪಿಯ 150 ಕೋಟಿ ರೂ ದಾಟಿದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕೂಡ ಗುರುತಿಸಿಕೊಂಡಿರುವುದು ನಮ್ಮೆಲ್ಲರ ಹೆಮ್ಮೆ.ಕಷ್ಟದ ಕಾಲದಲ್ಲಿ ಸಂಸ್ಥೆಯನ್ನು ಹಿರಿಯರು ಹುಟ್ಟು ಹಾಕಿದರು., ಇಂದಿಗೆ ಯಶಸ್ವಿಯಾಗಿ ಸಂಸ್ಥೆ ಮುನ್ನುಗ್ಗುತ್ತಿದೆ. ಆಡಳಿತ ಮಂಡಳಿಯ ಪ್ರಾಮಾಣಿಕ ಸೇವೆ, ಸಹಕಾರದಿಂದಲೇ ಇಂದು ಸಂಸ್ಥೆ, ಆರ್ಥಿಕ ವ್ಯವಹಾರಗಳನ್ನು ಮಾತ್ರವಲ್ಲ ಸಮಾಜಮುಖಿಯಾಗಿ ಕೆಲಸಗಳನ್ನು ಕೂಡ ಮಾಡಲು ಸಾಧ್ಯವಾಗಿದೆ ಎಂದರು.

ನಗರಸಭೆ ಉಡುಪಿಯ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಮಂಗಳೂರಿನ ಗೋಕುಲ್ ದಾಸ್ ನಾಯಕ್, ಸ್ಥಳೀಯ ನಗರಸಭಾ ಸದಸ್ಯರಾದ ಸುಮಿತ್ರಾ ಆರ್. ನಾಯಕ್ ಮಾತನಾಡಿ ಶುಭ ಹಾರೈಸಿದರು. ನಿರ್ದೇಶಕರುಗಳಾದ ಶ್ರೀ ಬಿ ರಾಮಕೃಷ್ಣ ನಾಯಕ್ ಪರ್ಕಳ,ಸದಾನಂದ ನಾಯಕ್ ಎನ್. ಹೆರ್ಗ , ರವೀಂದ್ರ ಪಾಟ್ಕರ್, ಕೋಡುಗುಡ್ಡೆ ಗಣಪತಿ ನಾಯಕ್ ಕೆ. ದೇವಿನಗರ, ಜಯಂತಿ ನಾಯಕ್, ಪರ್ಕಳ, ವಿಜೇತ್ ಕುಮಾರ್, ಬೆಳ್ಳರ್ಪಾಡಿ ಗಣಪತಿ ಪ್ರಭು, ಕುಕ್ಕೆಹಳ್ಳಿ ರೂಪಾ ನಾಯಕ್, ಪರ್ಕಳ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಪಾಡುರಂಗ ಕಾಮತ್ ಎಸ್. ಸ್ವಾಗತಿಸಿದರು, ಕುಮಾರಿ ಭೂಮಿಕಾ ಪ್ರಾರ್ಥಿಸಿದರು. ಅಕ್ಷತಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ನರಸಿಂಹ ನಾಯಕ್ ಮಣಿಪಾಲ ವಂದಿಸಿದರು.

ಗಮನ ಸೆಳೆದ ಸಾಂಸ್ಕೃತಿಕ ವೈಭವ:
ಸಭಾ ಕಾರ್ಯಕ್ರಮದ ಬಳಿಕ. ಸಿಂಧೂ ಸಂಗೀತಾ ಬಳಗ ಉಡುಪಿ ಕಲರ್ಸ್ ಕನ್ನಡ ಖ್ಯಾತಿಯ ರಾಜ್ಯ ಪ್ರಶಸ್ತಿ ವಿಜೇತೆ, ಕರ್ನಾಟಕ ಸ್ಟೇಟ್ ಚಲನಚಿತ್ರ ಅವಾರ್ಡ್ ಮುಡಿಗೇರಿಸಿದ ಕಲಾವತಿ ದಯಾನಂದ್ ಇವರಿಂದ ಜಾನಪದ, ದಾಸ ಸಾಹಿತ್ಯ, ತತ್ವಪದಗಳು, ಭಾವ ಗೀತೆ, ದೇಶ ಭಕ್ತಿಗೀತೆ, ಭಕ್ತಿ ಗೀತೆ, ರಂಗ ಗೀತೆಗಳ ಕಲಾ ಸಂಗೀತದ ರಸಧಾರೆ ಕಾರ್ಯಕ್ರಮ ನಡೆಯಿತು.