ಕಿನ್ನಿಮುಲ್ಕಿಯಲ್ಲಿ ವೈಭವದ ಗಣೇಶ ವಿಸರ್ಜನಾ ಮೆರವಣಿಗೆ; 40ಕ್ಕೂ ಅಧಿಕ ಟ್ಯಾಬ್ಲೊ, ಬ್ಯಾಂಡ್‌–ವಾದ್ಯಗಳ ಮೆರಗು!

ಉಡುಪಿ: ಕನ್ನರ್ಪಾಡಿ–ಕಿನ್ನಿಮುಲ್ಕಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಹತ್ತು ದಿನಗಳಿಂದ ನಡೆಯುತ್ತಿದ್ದ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪದ ಅಂಗವಾಗಿ ಬುಧವಾರ ರಾತ್ರಿ ವೈಭವದ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಿತು.

ಸಂಜೆ 7 ಗಂಟೆಗೆ ಧೂಮ್ರವರ್ಣ ಗಣಪತಿಯ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. 40ಕ್ಕೂ ಅಧಿಕ ಆಕರ್ಷಕ ಟ್ಯಾಬ್ಲೊಗಳು, ಬ್ಯಾಂಡ್‌ ಹಾಗೂ ವಿವಿಧ ವಾದ್ಯಗಳೊಂದಿಗೆ ಸಾಗಿದ ಮೆರವಣಿಗೆ ಫಯರ್‌ಸ್ಟೇಷನ್ ರಸ್ತೆ, ಬ್ರಹ್ಮಗಿರಿ ವೃತ್ತ, ಜೋಡುಕಟ್ಟೆ–ಕಿನ್ನಿಮುಲ್ಕಿ ಮುಖ್ಯರಸ್ತೆ, ಬಲಾಯಿಪಾದೆ, ಸ್ವಾಗತ ಗೋಪುರ ಮಾರ್ಗವಾಗಿ ಕನ್ನರ್ಪಾಡಿ ದೇವಳದ ಕಣ್ವ ಪುಷ್ಕರಣಿ ತಲುಪಿತು. ಬಳಿಕ ಗಣಪತಿ ಮೂರ್ತಿಯ ಜಲಸ್ತಂಭನ ನೆರವೇರಿಸಲಾಯಿತು.

ಮೆರವಣಿಗೆಯಲ್ಲಿ ಶ್ರೀರಾಮ ದೇವರು ಹಾಗೂ ರಾಮಮಂದಿರ, ಗಣೇಶ, ಕೆಜಿಎಫ್ ಸಿನಿಮಾ, ಕಲ್ಲಡ್ಕ ಬೊಂಬೆ, ಗೊಂಬೆ ಸೇರಿದಂತೆ ವಿವಿಧ ವಿಷಯಗಳನ್ನು ಬಿಂಬಿಸುವ ಟ್ಯಾಬ್ಲೊಗಳು ಗಮನಸೆಳೆದವು.

ಡಿಜೆ ಹಾಗೂ ವಾದ್ಯಗಳ ಸದ್ದಿಗೆ ಯುವಕ–ಯುವತಿಯರು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಗಣೇಶನ ವೈಭವದ ವಿಸರ್ಜನಾ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ರಸ್ತೆಯುದ್ದಕ್ಕೂ ಸಾವಿರಾರು ಮಂದಿ ಸೇರಿದ್ದರು.