ಜ.13 ರಿಂದ 15 ಪವರ್ ಪ್ರಸ್ತುತ ಪಡಿಸುವ 4 ನೇ ಆವೃತ್ತಿಯ ಪವರ್ ಪರ್ಬ 2023- ಗ್ರಾಂಡ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ:   ಪವರ್ ಪರ್ಬವು ಪವರ್ ಸಂಸ್ಥೆಯಿಂದ ಉಡುಪಿಯಲ್ಲಿ ಆಯೋಜಿಸಲ್ಪಡುತ್ತಿರುವ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ ಹೇಳಿದರು.

ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪವರ್ ಪರ್ಬ ಉಡುಪಿಯ ಜನರ ಆಕರ್ಷಣೆಯ ಹಾಗೂ ಮೆಚ್ಚುಗೆಯ ಕಾರ್ಯಕ್ರಮವಾಗಿದ್ದು ಉತ್ತಮ ಜನ ಸ್ಪಂದನೆಗೆ ಪಾತ್ರವಾಗಿದೆ. ಮಹಿಳಾ ಉದ್ಯಮಿಗಳಿಂದಲೇ ಉತ್ಪಾದಿಸಿ ಮಾರುಕಟ್ಟೆ ಮಾಡಲ್ಪಡುತ್ತಿರುವ ವಿಭಿನ್ನ ಉತ್ಪನ್ನಗಳು ಮತ್ತು ಸೇವೆಗಳ ಪರಿಚಯ ಹಾಗೂ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಲು ಇದೊಂದು ಉತ್ತಮ ವೇದಿಕೆ. ಅಲ್ಲದೆ, ಈ ಮೂಲಕ ಗ್ರಾಹಕರನ್ನು ತಲುಪಲು ಹಾಗೂ ಪ್ರಾಯೋಗಿಕವಾಗಿ ಮಾರುಕಟ್ಟೆಯ ಕುರಿತು ತಿಳಿದುಕೊಳ್ಳಲು ಮತ್ತು ಅನುಭವ ಪಡೆದುಕೊಳ್ಳಲು ಸಹಕಾರಿಯಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳಾ ಉದ್ಯಮಿಗಳನ್ನು ಒಂದೇ ಸೂರಿ ನಡಿಗೆ ತರುವ ವಿಶೇಷ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ವರ್ಷದ ಪವರ್ ಪರ್ಬವನ್ನು ಉಡುಪಿ ಜಿಲ್ಲಾ ರಜತಮಹೋತ್ಸವ ಸಮಿತಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಜಿ ಟ್ವೆಂಟಿ ಒನ್ ಅರ್ತ್ ಒನ್ ಫ್ಯಾಮಿಲಿ,ಒನ್ ಫ್ಯೂಚರ್ ಇವುಗಳ ಸಹಯೋಗದೊಂದಿಗೆ ಜನವರಿ 13, 14, 15 ರಂದು ಉಡುಪಿ ಬೀಡಿನಗುಡ್ಡೆಯ ಬಯಲು ರಂಗ ಮಂದಿರದಲ್ಲಿ ನಡೆಸಲಾಗುತ್ತಿದ್ದು, ಈ ಬೃಹತ್ ಮೇಳದಲ್ಲಿ 125ಕ್ಕೂ ಹೆಚ್ಚು ಉತ್ಪನ್ನಗಳ/ ಸೇವೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಇರುತ್ತದೆ. ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಲು ವಿಶಿಷ್ಟ ಆಹಾರ ಮಳಿಗೆಗಳು, ವಿಶೇಷ ಆಟದ ವಲಯಗಳ ಜೊತೆಗೆ ಬೇರೆ ಬೇರೆ ರೀತಿಯ ಸ್ಪರ್ಧೆಗಳು ನಡೆಯಲಿವೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಜ.13 ರಂದು ಸಂಜೆ 5.30ಕ್ಕೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಇವರು ಮಾಡಲಿದ್ದು, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಕಲ್ಪನಾ ಗೋಪಾಲನ್ ಭಾಗವಹಿ ಸಲಿದ್ದಾರೆ.

ಗೌರವ ಅತಿಥಿಗಳಾಗಿ ಶಾಸಕ ಕೆ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಎಂಎಸ್‌ಎಂ ನಿರ್ದೇಶಕ ದೇವರಾಜ್ ಕೆ, ಡಿಐಸಿಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಡುಪಿಯ ಡಿಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥ ಡಾ. ಎಚ್ ಟಿ ವಾಸಪ್ಪ,ಅಟಲ್ ಇನ್ಕ್ಯುಬೇಶನ್ ಸೆಂಟರ್ ನಿಟ್ಟೆ ಸಿಇಒ ಮತ್ತು ಪವರ್‌ನ ಮೆಂಟರ್ ಡಾ. ಎ ಪಿ ಆಚಾರ್ ಉಪಸ್ಥಿತರಿರಲಿದ್ದಾರೆ.

ಸಮಾರೋಪ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಎಡಿಸಿ ಶ್ರೀಮತಿ ವೀಣಾ ಬಿ ಎನ್,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಸಿನಿ ನಟಿ ನೀತಾ ಅಶೋಕ್ ಮುಂತಾದವರು ಇರಲಿದ್ದಾರೆ ಎಂದು ಮಾಹಿತಿ ನೀಡಿದರು.

ಪವರ್ ಸಂಸ್ಥೆಯ ಕಾರ್ಯದರ್ಶಿ ಅರ್ಚನಾ ರಾವ್, ಖಜಾಂಚಿ ಪ್ರತಿಭಾ ಆರ್. ವಿ, ಕಾರ್ಯಕ್ರಮ ಸಂಯೋಜಕಿ ಶಿಲ್ಪಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ದೀನಾ ಪ್ರಭಾಕರ್,  ಜೊತೆ ಕಾರ್ಯದರ್ಶಿ ತೃಪ್ತಿ ನಾಯಕ್, ಪುಷ್ಪಾ ಗಣೇಶ್ ರಾವ್,   ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಂ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.