ಬೆಂಗಳೂರು: ಈ ಬಾರಿ ಅದ್ದೂರಿ ದಸರಾ ಆಚರಣೆಗಳನ್ನು ಮಾಡಲು ರಾಜ್ಯ ಸರಕಾರವು ಉತ್ಸುಕವಾಗಿದ್ದು, ಹಳೆಯದರ ಜೊತೆ ಹೊಸ ಆಯಾಮಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ನಾಡ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಲ್ಲಿ ಭಾಗವಹಿಸಿ ಆ ಬಳಿಕ ಮಾಧ್ಯಮದೊವರೊಂದಿಗೆ ಮಾತನಾಡಿ “ಇವತ್ತು ನಾಡ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಲ್ಲಿ ಸಾರ್ವಜನಿಕರೂ ಸೇರಿ ನಾವೆಲ್ಲರೂ ಕೂಡಾ ಅತ್ಯಂತ ಭಕ್ತಿಭಾವದಿಂದ ಪಾಲ್ಗೊಂಡಿದ್ದೇವೆ. ತಾಯಿ ಶ್ರೀ ಚಾಮುಂಡೇಶ್ವರಿ ಇಡೀ ನಾಡಿಗೆ ಸುಭಿಕ್ಷೆ , ಶಾಂತಿ ನೆಮ್ಮದಿ ಕೊಡಲಿ, ಎಲ್ಲರ ಬದುಕಿನಲ್ಲಿ ಅಭಿವೃದ್ಧಿ ಆಗಲಿ ಎಂದು ನಾನು ಪ್ರಾರ್ಥಿಸಿದ್ದೇನೆ” ಎಂದರು.
ಜನಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿ, ಅದ್ದೂರಿ ದಸರಾ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಕಳೆದ 2 ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಆಚರಣೆ ಸಾಂಪ್ರದಾಯಿಕವಾಗಿತ್ತು. ಈ ಬಾರಿ ಅದ್ದೂರಿ ದಸರಾ ನಡೆಸಲು ತೀರ್ಮಾನಿಸಲಾಗಿದೆ. ಹಳೆಯ ಸಾಂಪ್ರದಾಯಿಕ ಪದ್ದತಿಗಳಾದ ಗಜ ಮೆರವಣಿಗೆಯ ಜೊತೆಗೆ ಹೊಸ ಆಕರ್ಷಣೆಗಳನ್ನೂ ಸೇರಿಸಿಕೊಳ್ಳಲಾಗುವುದು. ದಸರಾ ಹಬ್ಬದ 15 ದಿನ ಮುಂಚಿತವಾಗಿ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗುವುದು. ಹೆಚ್ಚಿನ ಜನರನ್ನು ಆಕರ್ಷಿಸಲು ತಕ್ಷಣವೇ ಅಂತರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಪ್ರಾರಂಭಿಸಲಾಗುವುದು. ಮುಂದಿನ ಒಂದು ವಾರದೊಳಗೆ ಮೈಸೂರು ಟೂರಿಸಂ ಸೆಂಟರ್ ಅನ್ನು ನಿರ್ಮಿಸಲು ಆದೇಶ ನೀಡಲಾಗುವುದು. ಒಟ್ಟಾರೆಯಾಗಿ ಈ ಬಾರಿ ಹಲವಾರು ಹೊಸ ಆಯಾಮಗಳಿರುವ ಅದ್ದೂರಿ ದಸರಾ ಆಯೋಜನೆ ಮಾಡಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಕಬಿನಿ ಮತ್ತು ಕೃಷ್ಣರಾಜ ಸಾಗರದಲ್ಲಿ ಕಾವೇರಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ನೀಡಿದರು.