ಉಡುಪಿ, ಮೇ 9: ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರತೀ ಗ್ರಾಮ ಪಂಚಾಯತ್‍ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್. ಹೇಳಿದ್ದಾರೆ.
ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಸಂಬಂಧಪಟ್ಟ ಇಂಜಿನಿಯರ್‍ಗಳ ಸಭೆ ನಡೆಸಿ ಮಾತನಾಡಿದರು. ಕುಡಿಯುವ ನೀರಿನ ವ್ಯವಸ್ಥಿತ ನಿರ್ವಹಣೆ, ಟ್ಯಾಂಕರ್ ಮೂಲಕ ನೀರು ಸರಬರಾಜು ಸೇರಿದಂತೆ ಪ್ರತೀ ಗ್ರಾಮ ಪಂಚಾಯತ್‍ನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಲಭ್ಯವಾಗುವುದರಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡೆಲ್ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಸಕ್ತ ಟ್ಯಾಂಕರ್ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ಮುಂದಿನ ವರ್ಷದಿಂದ ಖಾಯಂ ನೀರಿನ ಮೂಲ ಸೃಷ್ಟಿಯಾಗುವಂತೆ ಮುಂಬರುವ ಕ್ರಿಯಾ ಯೋಜನೆಯಲ್ಲಿ ಅಳವಡಿಸಬೇಕು. ಹೊಸದಾಗಿ ಬೋರ್‍ವೆಲ್ ಕೊರೆತ, ವಿದ್ಯುತ್ ಸಂಪರ್ಕ, ನೀರು ಸರಬರಾಜು ಕೊಳವೆ, ರೀಚಾರ್ಜ್ ಮಾಡುವುದು ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಒಂದೇ ಅಂದಾಜು ಪಟ್ಟಿಯಲ್ಲಿ ಸೇರಿಸಬೇಕು. ಪದೇ ಪದೇ ಅಂದಾಜು ಪಟ್ಟಿಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
30 ಲಕ್ಷ ರೂ. ಗಳವರೆಗಿನ ಕುಡಿಯುವ ನೀರಿನ ಕಾಮಗಾರಿಗಳಿಗೆ ಸಂಪೂರ್ಣ ಅನುದಾನ ಬಂದ ಬಳಿಕವಷ್ಟೇ ಕಾಮಗಾರಿ ನಡೆಸಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.