ಗ್ರಾ. ಪಂ. ಉಪ ಚುನಾವಣೆ: ಮದ್ಯ ಮಾರಾಟ ನಿಷೇಧ

ಉಡುಪಿ, ಮೇ 9: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟಾ ಗ್ರಾಮ ಪಂಚಾಯತ್, ಕಾಪು ತಾಲೂಕಿನ ಮುದರಂಗಡಿ ಗ್ರಾಮ ಪಂಚಾಯತ್, ಕುಂದಾಪುರ ತಾಲೂಕಿನ ತಲ್ಲೂರು ಹಾಗೂ ಹಾಲಾಡಿ ಗ್ರಾಮ ಪಂಚಾಯತ್‍ಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಈ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಮೇ 13 ರಿಂದ 31 ರ ವರೆಗೆ ಜಾರಿಯಲ್ಲಿರುತ್ತದೆ.

ಚುನಾವಣೆಯು ಶಾಂತ ಮತ್ತು ಮುಕ್ತವಾಗಿ ನಡೆಯುವಂತಾಗಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ , ಚುನಾವಣೆ ನಡೆಯಲಿರುವ ಎಲ್ಲಾ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಒಣ ದಿನಗಳೆಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ದಿನಗಳಂದು ಈ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಬರುವ ಸನ್ನದುಗಳನ್ನು ಮುಚ್ಚಿ, ಮೊಹರು ಮಾಡಿ ಅವುಗಳ ಕೀಯನ್ನು ಸಂಬಂಧಪಟ್ಟ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ವಶಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.