ಮಾರ್ಚ್ 1 ರಿಂದ ಕಪ್ಪು ಬಟ್ಟೆ ಧರಿಸಿ ಸೇವೆ ನೀಡಲಿರುವ ಗ್ರಾಮ ಪಂಚಾಯತ್ ನೌಕರರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಾಂತಿಯುತ ಪ್ರತಿಭಟನೆ

ಬೆಂಗಳೂರು: ರಾಜ್ಯಮಟ್ಟದಲ್ಲಿ ಪಂಚಾಯತ್ ನೌಕರರು ಮಾರ್ಚ್ 1 ರಿಂದ ತಮಗಾದ ನೋವು, ಶೋಷಣೆ ಮತ್ತು ಸಮಸ್ಯೆಗಳ ವಿರುದ್ದ ಸಾರ್ವಜನಿಕ ಸೇವೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕಚೇರಿಯಲ್ಲಿ ಸಾರ್ವಜನಿಕವಾಗಿ ಕಪ್ಪು ಬಟ್ಟೆ/ ಕಪ್ಪು ಪಟ್ಟಿ ಧರಿಸಿ ಇಲಾಖೆಯಿಂದ ಬೇಡಿಕೆ ಈಡೇರುವವರೆಗೂ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೋಭಿವೃದ್ದಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ ತಿಳಿಸಿದ್ದಾರೆ.

ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಸಿಬ್ಬಂದಿಗಳು ಹಲವಾರು ವರ್ಷಗಳಿಂದ ಸಂಘಟನೆಯ ಮೂಲಕ ಇಲಾಖೆಗೆ ಹಲವಾರು ಬೇಡಿಕೆಗಳನ್ನು ಮಂಡಿಸುತ್ತಾ ಬಂದಿದೆ. ಆದರೆ ಇಲಾಖೆಯು ನೌಕರರ ಮೂಲ ಬೇಡಿಕೆಗಳಾದ ಸಿ ಮತ್ತು ಡಿ ದರ್ಜೆಯ ವೇತನ ಶ್ರೇಣಿ, ಆರೋಗ್ಯ ಭದ್ರತೆ, ಅನುಮೋದನೆ ಆಗದಿರುವ ಬಿಲ್ಲ್ ಕ್ಲರ್ಕ್, ಕ್ಲರ್ಕ್ ಕಮ್ ಡಿಇಒ, ವಾಟರ್ ಮ್ಯಾನ್, ಶುಚಿತ್ವ ನೌಕರ, ಅಟೆಂಡರ್ ಉಂದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ, ಡಾಟಾ ಎಂಟ್ರಿ ಆಪರೇಟರ್ ಗಳ ಅನುಮೋದನೆ ಸಮಸ್ಯೆ, ಸಕಾಲ ಮುಂಬಡ್ತಿ, ನಿವೃತ್ತಿಯಲ್ಲಿ ಆರ್ಥಿಕ ಭದ್ರತೆಗಳನ್ನು ಈಡೇರಿಸದೆ ನೌಕರರನ್ನು ಹಗಲಿರುಳು ದುಡಿಸಿಕೊಳ್ಳುತ್ತಿದ್ದು, ನೌಕರರು ಶೋಷಣೆಗೊಳಗಾಗುತ್ತಿದ್ದು ಆರೋಗ್ಯ ಭದ್ರತೆ ಇಲ್ಲದೆ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದಾಗ್ಯೂ, ಇಲಾಖೆಯು ನೌಕರರ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಸಡ್ಡೆ ಮತ್ತು ಮಲತಾಯಿ ಧೋರಣೆ ತೋರುತ್ತಿದ್ದು, ಆದ್ದರಿಂದ ಮುಂದಿನ ತಿಂಗಳಿನಿಂದ ಕಪ್ಪು ಬಟ್ಟೆ/ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ಕೈಗೊಳ್ಳಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.