ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ನಿರಂತರವಾಗಿ ಏರುತ್ತಿದ್ದು, ಕಳೆದ ವರ್ಷದ ಫೆಬ್ರುವರಿ–ಮಾರ್ಚ್ಗಿಂತ ಈ ಬಾರಿ ಗೃಹ ವಿದ್ಯುತ್ ಬಳಕೆ ಶೇ 30ರಷ್ಟು ಹೆಚ್ಚಳವಾಗಿದೆ. ಇದೀಗ ಗೃಹ ಜ್ಯೋತಿ ಫಲಾನುಭವಿಗಳಿಗೆ ಇದರ ಬಿಸಿ ತಟ್ಟಿದೆ.
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ನಿಯಮಗಳ ಪ್ರಕಾರ ಸೌಲಭ್ಯ ಪಡೆದಿರುವ ಕುಟುಂಬಗಳು ಹಿಂದಿನ ಒಂದು ವರ್ಷ ಬಳಸಿದ್ದ ಸರಾಸರಿ ಯೂನಿಟ್ ಹಾಗೂ ಅದರ ಮೇಲೆ 10 ಹೆಚ್ಚುವರಿ ಯೂನಿಟ್ ಮಾತ್ರ ಉಚಿತವಾಗಿ ಪಡೆಯಬಹುದಾಗಿದೆ. ಅದಕ್ಕಿಂತ ಎಷ್ಟು ಹೆಚ್ಚು ಬಳಕೆ ಮಾಡಲಾಗುತ್ತದೆಯೋ ಅಷ್ಟು ಯೂನಿಟ್ಗಳಿಗೆ ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಬಳಕೆ 200 ಯೂನಿಟ್ ದಾಟಿದರೆ ಸಂಪೂರ್ಣ ಶುಲ್ಕ ತೆರಬೇಕಾಗುತ್ತದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ನಿರಂತರವಾಗಿ ಏರುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಬಿಸಿಲಿನ ಧಗೆ ತಡೆದುಕೊಳ್ಳಲಾಗುತ್ತಿಲ್ಲ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು ದಾಖಲಾಗುತ್ತಿದೆ. ಉಷ್ಣಾಂಶ ಹೆಚ್ಚಳ ಹಾಗೂ ಗಾಳಿಯಲ್ಲಿ ತೇವಾಂಶ ಕಡಿಮೆ ಆಗಿರುವ ಕಾರಣ ಹಗಲು ಹಾಗೂ ರಾತ್ರಿ ಸಮಯದಲ್ಲೂ ಸೆಖೆ ಸಹಿಸಲ ಸಾಧ್ಯವಾಗಿದೆ.
ಕರಾವಳಿಯ ಜಿಲ್ಲೆಗಳು, ಕಲಬರಗಿ, ವಿಜಯಪುರ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ಧಾರವಾಡ, ಹಾವೇರಿ, ಚಿತ್ರದುರ್ಗ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ. ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು, ಹಾಸನಗಳಲ್ಲೂ ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶವಿದೆ. ರಾತ್ರಿ ವೇಳೆ ಸೆಖೆಯಿಂದ ಮುಕ್ತಿ ಪಡೆಯಲು ಜನರು ಫ್ಯಾನ್, ಕೂಲರ್ಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಉಚಿತ ಯೋಜನೆಯ ಯೂನಿಟ್ಗಳ ಮಿತಿ ದಾಟುತ್ತಿದೆ.
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸಯಂತೆ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ 2023ರ ಆಗಸ್ಟ್ನಲ್ಲಿ ಚಾಲನೆ ನೀಡಲಾಗಿತ್ತು. ರಾಜ್ಯದ 1.60 ಕೋಟಿ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.
ಯೋಜನೆ ಜಾರಿಯಾದ 6 ತಿಂಗಳು ತಮಗೆ ನಿಗದಿಯಾದ ಯೂನಿಟ್ ಮಿತಿಯಲ್ಲಿಯೇ ಶೇ 99ರಷ್ಟು ಜನರು ಬಳಕೆ ಮಾಡುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಅನುಭವಿಸುತ್ತಿದ್ದರು. ಆದರೆ, ಈ ತಿಂಗಳಲ್ಲಿ ಶೇ 16ರಷ್ಟು ಗ್ರಾಹಕರು ಹೆಚ್ಚುವರಿ ಬಳಕೆಯ ಶುಲ್ಕ ಪಾವತಿಸಬೇಕಿದೆ. ಶೇ 4ರಷ್ಟು ಗ್ರಾಹಕರು 200 ಯೂನಿಟ್ ಮಿತಿ ದಾಟಿದ್ದು, ಉಚಿತ ಸೌಲಭ್ಯದ ಅವಕಾಶದಿಂದ ವಂಚಿತರಾಗಿದ್ದಾರೆ. ಏಪ್ರಿಲ್ ವೇಳೆಗೆ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೆಚ್ಚುವರಿ ಶುಲ್ಕ ಗ್ರಾಹಕರ ಕಣ್ಣು ಕತ್ತಲೆ ಬರಿಸುತ್ತಿದೆ.