ಟೋಲ್ ಪ್ಲಾಜಾ, ಫಾಸ್ಟ್ ಟ್ಯಾಗ್, ಉದ್ದುದ್ದ ಲೈನ್ ಗಳಿಗೆ ಗುಡ್ ಬೈ: ವಾಹನಗಳ ಸುಗಮ ವಾಹನ ಸಂಚಾರಕ್ಕೆ ಮಹತ್ವದ ಬದಲಾವಣೆಗೆ ಸಜ್ಜಾದ ಕೇಂದ್ರ

ನವದೆಹಲಿ: ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ಟೋಲ್ ಪ್ಲಾಜಾಗಳನ್ನು ಬದಲಿಸಲು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮುಂದಿನ ಆರು ತಿಂಗಳಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಸರ್ಕಾರದ ಮುಂದೆ ಎರಡು ಆಯ್ಕೆಗಳಿವೆ. ಮೊದಲನೆಯದು ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಯಾಗಿದ್ದು, ಜಿಪಿಎಸ್ ವ್ಯವಸ್ಥೆಯ ಮೂಲಕ ಟೋಲ್ ಅನ್ನು ನೇರವಾಗಿ ಪ್ರಯಾಣಿಕರ ಬ್ಯಾಂಕ್ ಖಾತೆಗಳಿಂದ ತೆಗೆದುಕೊಳ್ಳಲಾಗುತ್ತದೆ. ಎರಡನೆಯದು ನೇರವಾಗಿ ವಾಹನಗಳ ನಂಬರ್ ಪ್ಲೇಟ್‌ಗಳ ಮೂಲಕ ಟೋಲ್ ಗಳನ್ನು ಸಂಗ್ರಹಣೆ ಮಾಡುವುದು ಎಂದರು.

ಟೋಲ್ ಸಂಗ್ರಹಿಸಲು ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಬಳಸುವಾಗ ಫಾಸ್ಟ್ಯಾಗ್ ಬದಲಿಗೆ ಜಿಪಿಎಸ್ ಅನ್ನು ಪರಿಚಯಿಸುವ ಪ್ರಕ್ರಿಯೆಯಲ್ಲಿ ಸರ್ಕಾರ ಇದೆ ಎಂದು ತಿಳಿಸಿದ ಅವರು, ಸರ್ಕಾರವು ಟೋಲ್ ಸಂಗ್ರಹಕ್ಕೆ ಅತ್ಯುತ್ತಮ ತಂತ್ರಜ್ಞಾನವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿದೆ ಮತ್ತು ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಮಹತ್ವದ ಕಾನೂನನ್ನು ತರಲಿದೆ ಎಂದರು.

ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ಜಾಮ್‌ನಿಂದ ಜನರಿಗೆ ಪರಿಹಾರ ನೀಡಲು ಈ ವ್ಯವಸ್ಥೆ ಮುಖ್ಯವಾಗಿದೆ. ಫಾಸ್ಟ್ಯಾಗ್ ಅನ್ನು ಪರಿಚಯಿಸಿದ ನಂತರ ಟೋಲ್ ಸಂಗ್ರಹವು ದಿನಕ್ಕೆ 120 ಕೋಟಿ ರೂಪಾಯಿಗಳಿಗೆ ಗಣನೀಯವಾಗಿ ಏರಿದೆ. ಸುಮಾರು 97 ಪ್ರತಿಶತ ಏರಿಕೆಯೊಂದಿಗೆ ಇಲ್ಲಿಯವರೆಗೆ, 5.56 ಕೋಟಿ ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ ಎಂದು ಗಡ್ಕರಿ ಮಾಹಿತಿ ನೀಡಿದರು.