ಚಿತ್ರರಂಗದ ಮನವಿಗೆ ಸ್ಪಂದಿಸಿದ ಸರ್ಕಾರ: ಥಿಯೇಟರ್ ಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಏಪ್ರಿಲ್ 7ರ ವರೆಗೆ ಥಿಯೇಟರ್ ಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಸರ್ಕಾರವು ಏ. 2ರಂದು ಜಾರಿಗೊಳಿಸಿದ ಹೊಸ ಮಾರ್ಗಸೂಚಿಯಲ್ಲಿ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತ್ತು. ಇದಕ್ಕೆ ಫಿಲ್ಮ್ ಚೇಂಬರ್ ಹಾಗೂ ಸ್ಯಾಂಡಲ್ ವುಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೆ ಏ. 1ರಂದು ಬಿಡುಗಡೆಯಾದ ನಟ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರತಂಡವು ಸರ್ಕಾರದ ನಿಯಮಕ್ಕೆ ತೀವ್ರ ಆಕ್ರೋಶ ಹೊರಹಾಕಿತ್ತು.

ಇಂದು ಫಿಲ್ಮ್ ಚೇಂಬರ್ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಭರ್ತಿಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿತ್ತು. ಅಲ್ಲದೆ, ಪುನೀತ್ ರಾಜ್ ಕುಮಾರ್ ನೇತೃತ್ವದಲ್ಲಿ ಯುವರತ್ನ ಚಿತ್ರತಂಡವು ಪ್ರತ್ಯೇಕವಾಗಿ ಸಿಎಂ ಭೇಟಿಯಾಗಿ ಮನವಿ‌ ಮಾಡಿತ್ತು.

ಚಿತ್ರರಂಗದ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಏ. 7ರ ವರೆಗೆ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ದ.ಕ, ಉಡುಪಿ ಸೇರಿ 8 ಜಿಲ್ಲೆಗಳಿಗೆ ರಿಲೀಫ್ ಸಿಕ್ಕಿದೆ. ಈ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಶೇ. 50ಕ್ಕೆ ಇಳಿಸಲಾಗಿತ್ತು. ಏಪ್ರಿಲ್ 7ರ ಬಳಿಕ ಶೇ. 50ರಷ್ಟು ಭರ್ತಿ ರೂಲ್ಸ್ ಜಾರಿಯಾಗಲಿದೆ.