ಕೋವಿಡ್‌ ನಿಂದ ಮೃತರಾದ ರಾಜ್ಯದ 31 ಪತ್ರಕರ್ತರಿಗೆ ಸರಕಾರದಿಂದ ಪರಿಹಾರ: ತಗಡೂರು

ಉಡುಪಿ: ರಾಜ್ಯದಲ್ಲಿ ಕೋವಿಡ್-19 ಸೋಂಕಿಗೆ ಸುಮಾರು 70 ಮಂದಿ ಮೃತಪಟ್ಟಿದ್ದು, ಇದರಲ್ಲಿ ಮೊದಲ ಅಲೆಯಲ್ಲಿ ಮೃತಪಟ್ಟ ಒಟ್ಟು 31 ಮಂದಿ ಪತ್ರಕರ್ತರ ಕುಟುಂಬಗಳಿಗೆ ಸರಕಾರದಿಂದ ತಲಾ 5ಲಕ್ಷ ರೂ. ಪರಿಹಾರ ಹಾಗೂ ಎರಡು ಕುಟುಂಬಗಳಿಗೆ ಮನೆ ಒದಗಿಸುವಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶ್ರಮಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಗೆ ಅಧಿಕೃತವಾಗಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಇಂದು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರನ್ನುದ್ದೇಶಿಸಿ ಮಾತನಾಡುತಿದ್ದರು.

ರಾಜ್ಯದಲ್ಲಿ ಸುಮಾರು 8000 ಮಂದಿ ಸಂಘದ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕೋವಿಡ್-19 ಸಂದಿಗ್ನ ಸ್ಥಿತಿಯಲ್ಲೂ ವೃತ್ತಿ ಬದ್ಧತೆಯಿಂದ ಕರ್ತವ್ಯ ನಿರ್ವ ಹಿಸಿದ ಪತ್ರಕರ್ತರು ಕೋವಿಡ್‌ಗೆ ಬಲಿಯಾಗಿದ್ದಾರೆ. ಮೊದಲ ಅಲೆಯಲ್ಲಿ ರಾಜ್ಯ 31 ಹಾಗೂ ಎರಡನೇ ಅಲೆಯಲ್ಲಿ 30ಕ್ಕೂ ಅಧಿಕ ಮಂದಿ ಪತ್ರಕರ್ತರು ಮೃತಪಟ್ಟಿದ್ದಾರೆ. ಅದೇ ರೀತಿ 30ಕ್ಕೂ ಅಧಿಕ ಮಂದಿ ಪತ್ರಿಕಾ ವಿತರಕರು ಕೂಡ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದರು.

ಕೋವಿಡ್-19 ಕಾರಣಕ್ಕೆ ಕಳೆದ ಒಂದೂವರೆ ವರ್ಷದಿಂದ ರಾಜ್ಯಮಟ್ಟದ ಪತ್ರಿಕೆ, ದೃಶ್ಯ ಮಾಧ್ಯಮ ಸೇರಿದಂತೆ ಸ್ಥಳೀಯ ಪತ್ರಿಕೆಗಳಿಗೆ ಬಾಕಿ ಇಟ್ಟಿರುವ 56 ಕೋಟಿ ರೂ. ಸರಕಾರಿ ಜಾಹೀರಾತು ಬಿಲ್‌ಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಏಷ್ಯನ್ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಮಾದನ್ ಗೌಡ ಮಾತನಾಡಿ, ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ರಾಜ್ಯ ಸರಕಾರ ನೀಡಿರುವ 2 ಕೋಟಿ ರೂ. ವೌಲ್ಯದ ನಿವೇಶನದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದರ ಶಂಕು ಸ್ಥಾಪನೆ ಶೀಘ್ರವೇ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಂಘ ಹಾಗೂ ಪ್ರತಕರ್ತರ ಬೇಡಿಕೆಗಳ ಮನವಿಯನ್ನು ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಯಿತು. ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಬಳಗ ವತಿಯಿಂದ ನೀಡಲಾದ ಫೇಸ್ ಶೀಲ್ಡ್‌ಗಳನ್ನು ಪತ್ರಕರ್ತರಿಗೆ ವಿತರಿಸ ಲಾಯಿತು. ಬಳಿಕ ರಾಜ್ಯಾಧ್ಯಕ್ಷರೊಂದಿಗೆ ಪತ್ರಕರ್ತರ ಸಮಸ್ಯೆ ಹಾಗೂ ಬೇಡಿಕೆ ಗಳ ಕುರಿತು ಚರ್ಚಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತರಾದ ರಾಕೇಶ್ ಕುಂಜೂರು ಹಾಗೂ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಮಲಬಾರ್ ಗೋಲ್ಡ್‌ನಿಂದ ಸನ್ಮಾನ: ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರನ್ನು ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ವತಿಯಿಂದ ಇಂದು ಪ್ರೆಸ್‌ಕ್ಲಬ್‌ನಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್‌ನ ಜಿಆರ್‌ಎಂ ರಾಘವೇಂದ್ರ ನಾಯಕ್, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ ಉಪಸ್ಥಿತರಿದ್ದರು