ಉಡುಪಿ: ಸುರತ್ಕಲ್ ಟೋಲ್‌ಗೇಟ್ ವಿಚಾರದಲ್ಲಿ ಸರ್ಕಾರ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ ಆರೋಪಿಸಿದ್ದಾರೆ. ಸುರತ್ಕಲ್ ಟೋಲ್ ಅನ್ನು ಹೆಜಮಾಡಿ ಟೋಲ್ ನೊಂದಿಗೆ ವಿಲೀನಗೊಳಿಸಲಾಗುವುದು. ಇದಾದ ನಂತರ, ನೀವು ಹೆಜಮಾಡಿಯಲ್ಲಿ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕು. ಸರ್ಕಾರವು ಜನರನ್ನು ಮೂರ್ಖರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಜಮಾಡಿ ಟೋಲ್ ನಲ್ಲಿ ಎರಡು ಟೋಲ್ ಗಳ ಮೊತ್ತವನ್ನು ವಸೂಲಿ ಮಾಡಲಾಗುವುದು. ಆ ಮೂಲಕ ಹಗಲು ದರೋಡೆ ಮುಂದುವರಿಯಲಿದೆ. ಸುರತ್ಕಲ್ ನಲ್ಲಿ ಟೋಲ್ ಗೇಟ್ ಮಾತ್ರ ತೆರವುಗೊಳಿಸಲಾಗುವುದು. ಆದಾಗ್ಯೂ, ಟೋಲ್ ಅನ್ನು ಹೆಜಮಾಡಿಯಲ್ಲಿ ಪಾವತಿಸಬೇಕಾಗುತ್ತದೆ. ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂದರು.