ಮೂಡುಬಿದಿರೆ: ಪ್ರಪಂಚದಾದ್ಯಂತ ಸುಮಾರು 70 ಮಿಲಿಯನ್ ಸ್ವಯಂಸೇವಕರನ್ನು ಹೊಂದಿರುವ ಸ್ಕೌಟ್ಸ್ ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ವಿದ್ಯಾಕಾಶಿ ಎನಿಸಿಕೊಂಡ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಬುಧವಾರದಂದು ವಿದ್ಯುಕ್ತ ಚಾಲನೆ ನೀಡಲಾಯಿತು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ 150 ಎಕರೆ ವಿಶಾಲ ಪ್ರದೇಶದಲ್ಲಿ ವಿಶ್ವ ಜಾಂಬೂರಿಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಸಾಂಸ್ಕೃತಿಕ ಜ್ಞಾನ ಮತ್ತು ಕೌಶಲ್ಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಜವಾಬ್ದಾರಿಯುತ ನಾಗರಿಕರಾಗಿ ದೇಶದ ಸೇವೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೊಡುಗೆ ನೀಡಬಹುದು. ಕರ್ನಾಟಕ ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿದ್ದು, ಕಳೆದ 100 ವರ್ಷಗಳಲ್ಲಿ 6.50 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಸಿದ್ಧಪಡಿಸಲಾಗಿದೆ. ಸಂಸ್ಥೆಯ “ಸಿದ್ಧರಾಗಿರಿ ಮತ್ತು ಸೇವೆ ಮಾಡಿ” ಈ ಧ್ಯೇಯವಾಕ್ಯವನ್ನು ಪಾಲಿಸುತ್ತಾ ಸ್ವಯಂಸೇವಕರು ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ ಎಂದರು.
ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರಿಗೆ ರೇಂಜ್ ಲೀಡರ್ ಅಮೃತ್ ಭಟ್ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಗೈಡ್ಸ್ ರಾಜ್ಯ ಆಯುಕ್ತರಾದ ರಾಧಾ ವೆಂಕಟೇಶ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ರವಿಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಉಪಸ್ಥಿತರಿದ್ದರು. ಸ್ಕೌಟ್ಸ್ ಗೈಡ್ಸ್ನ ದ.ಕ. ಜಿಲ್ಲಾಆಯುಕ್ತರಾದ ಡಾ.ಎಂ. ಮೋಹನ್ ಆಳ್ವ ವಂದಿಸಿದರು.
ದೇಶ ವಿದೇಶಗಳಿಂದ ಬಂದಿರುವ 50 ಸಾವಿರ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, 10 ಸಾವಿರ ಶಿಕ್ಷಕರು ಮತ್ತು ಸಹಸ್ರಾರು ಸಾರ್ವಜನಿಕರು ಭಾಗವಹಿಸಿರುವ ಜಾಂಬೂರಿ ಇತಿಹಾಸ ಸೃಷ್ಟಿಸಿದೆ. 12 ಎಕರೆ ಪ್ರದೇಶದಲ್ಲಿ ಕೃಷಿ, ತರಕಾರಿ, ಫಲ ಪುಷ್ಟಗಳ ಪ್ರದರ್ಶನ, ವಿಜ್ಞಾನ ಮೇಳ, ಪುಸ್ತಕ ಮೇಳ, ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳ ಕ್ರೀಡಾ ವೈವಿಧ್ಯಕ್ಕೆ 8 ಎಕರೆಯಲ್ಲಿ ಚ್ಯಾಲೆಂಜ್ ವ್ಯಾಲಿ ತಲೆ ಎತ್ತಿದೆ. ಆಹಾರ ಮೇಳ, ಗ್ರಾಹಕ ವಸ್ತುಗಳ ಮಾರಾಟ ಮೇಳ ಮತ್ತು 5 ವೇದಿಕೆಗಳಲ್ಲಿ ಏಕಕಾಲದಲ್ಲಿಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.