ಕಾರ್ಕಳ: ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗಳು ಕಳೆದ 5 ವರ್ಷಗಳಿಂದ ಚುನಾವಣೆ ನಡೆಯದೆ ಸ್ತಬ್ಧವಾಗಿದ್ದು, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗಳು ಕೂಡಾ ಅದೇ ಹಾದಿಯನ್ನು ಹಿಡಿಯುವ ಲಕ್ಷಣಗಳು ತೋರಿ ಬರುತ್ತಿರುವುದು ದುರದೃಷ್ಟಕರ.
ಸರಕಾರ ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಆಡಳಿತಾಧಿಕಾರಿಗಳ ಮೂಲಕ ನಡೆಸುವ ಹುನ್ನಾರ ಮಾಡಿರುವುದು ಖಂಡನೀಯ.
ರಾಜ್ಯ ಸರಕಾರದ ಬೇಜವಾರಬ್ದಾರಿತನ:
ರಾಜ್ಯ ಸರ್ಕಾರವು ಗ್ರಾಮ ಪಂಚಾಯತ್ ಚುನಾವಣೆ ಗಳಿಗೆ ಪೂರಕವಾಗಿ ವಾರ್ಡುವಾರು ಸದಸ್ಯರ ಸಂಖ್ಯೆ ಮತ್ತು ಮೀಸಲು ನಿಗದಿ ಮಾಡದೆ ಇರುವುದರಿಂದ ರಾಜ್ಯ ಚುನಾವಣಾ ಆಯೋಗ ಸರಕಾರದೆ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿರುವುದು ಸರಕಾರದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುವಂತಿದೆ.
ದೇಶದ ಸುಪ್ರೀಂ ಕೋರ್ಟ್ ಕೂಡ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಕಾಲದಲ್ಲಿ ನಡೆಸುವುದು ಸಾಂವಿಧಾನಿಕ ಕರ್ತವ್ಯ. ಅದನ್ನು ಮಾಡದಿದ್ದರೆ “ಕಾನೂನು ಸುವ್ಯವಸ್ಥೆಯ ಕುಸಿತ” ವೆಂದು ತೀಕ್ಷ್ಣವಾಗಿ ಹೇಳಿದೆ.
ಪ್ರಜಾಪ್ರಭುತ್ವದ ಬೇರುಗಳು ದುರ್ಬಲ:
ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸ್ಥಳೀಯ ಮಟ್ಟದ ನಾಯಕತ್ವ ನಿಷ್ಕ್ರಿಯವಾಗಿ ಕ್ರಮೇಣ ಪ್ರಜಾಪ್ರಭುತ್ವದ ಬೇರುಗಳು ದುರ್ಬಲವಾಗುತ್ತಾ ಹೋಗುತ್ತದೆ.
ಸರಕಾರ ಇದೇ ರೀತಿಯ ಉದ್ದಟತನ ಮತ್ತು ಬೇಜವಾಬ್ದಾರಿತನವನ್ನು ಮುಂದುವರಿಸಿದರೆ ರಾಜ್ಯದ ಲಕ್ಷಾಂತರ ಮಂದಿ ಸ್ಥಳೀಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಬೀದಿಗಿಳಿದು ಪ್ರತಿಭಟಿಸುವ ದಿನಗಳು ದೂರವಿಲ್ಲ ಎಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ (ರಿ.), ಬೆಂಗಳೂರು ಇದರ ಆಡಳಿತ ಮಂಡಳಿ ಸದಸ್ಯರಾದ ಸಾಣೂರು ನರಸಿಂಹ ಕಾಮತ್ ರವರು ಸರಕಾರಕ್ಕೆ ಎಚ್ಚರಿಸಿರುತ್ತಾರೆ.

















