ನವದೆಹಲಿ: ಪಿಟಿಐ ವರದಿಗಳನ್ನು ನಂಬುವುದಾದರೆ, ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಅಂಗವಾಗಿ ಆಗಸ್ಟ್ 22 ರಂದು ಭಾರತ XI ಮತ್ತು ವಿಶ್ವ XI ತಂಡದ ನಡುವೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವಂತೆ ಭಾರತ ಸರ್ಕಾರವು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕೋರಿಕೆ ಸಲ್ಲಿಸಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದ ಭಾಗವಾಗಿ ಭಾರತದ ಸಂಸ್ಕೃತಿ ಸಚಿವಾಲಯವು ಭಾರತದ ಅಗ್ರ ಆಟಗಾರರು ಮತ್ತು ವಿದೇಶದ ಜನಪ್ರಿಯ ಕ್ರಿಕೆಟಿಗರ ಮಧ್ಯೆ ಪಂದ್ಯವನ್ನು ಆಡಿಸಲು ಪ್ರಯತ್ನಿಸುವಂತೆ ಬಿಸಿಸಿಐ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸಚಿವಾಲಯದಿಂದ ಪ್ರಸ್ತಾವನೆ ಬಂದಿರುವುದನ್ನು ಬಿಸಿಸಿಐ ಮೂಲಗಳು ದೃಢಪಡಿಸಿವೆ. ಅಂತರರಾಷ್ಟ್ರೀಯ ಆಟಗಾರರ ಸೇವೆಗಳನ್ನು ಪಡೆಯಲು ಸಾಕಷ್ಟು “ಕಾರ್ಯಾಚರಣೆ ಮತ್ತು ಸಾರಿಗೆಯ ವ್ಯವಸ್ಥಾಪನಾ ಅಂಶಗಳು” ಇರುವುದರಿಂದ ಈ ಬಗ್ಗೆ ಇನ್ನೂ ಚರ್ಚೆ ನಡೆಸಲಾಗುತ್ತಿದೆ ಎಂದು ಸಂಸ್ಥೆಯು ಉಲ್ಲೇಖಿಸಿದೆ.
ಆಗಸ್ಟ್ 22 ರಂದು ಭಾರತ XI ಮತ್ತು ವಿಶ್ವ XI ನಡುವೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲು ನಾವು ಸರ್ಕಾರದಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ. ಉಳಿದ ವಿಶ್ವ ತಂಡಕ್ಕೆ, ನಮಗೆ ಕನಿಷ್ಠ 13-14 ಅಂತರಾಷ್ಟ್ರೀಯ ಆಟಗಾರರು ಬೇಕಾಗುತ್ತಾರೆ ಮತ್ತು ಅವರ ಲಭ್ಯತೆ ಬಗ್ಗೆ ಪರಿಶೀಲನೆ ಅಗತ್ಯವಿದೆ. ” ಎಂದು ಮೂಲವೊಂದು ತಿಳಿಸಿದೆ.
ಇದು ಇನ್ನೂ ಖಚಿತವಾಗದಿದ್ದರೂ, ಒಂದು ವೇಳೆ ಪಂದ್ಯ ನಡೆದರೆ, ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.