ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಿ ವೈದ್ಯರ ಆಗ್ರಹ: ಬೇಡಿಕೆ ಈಡೇರದಿದ್ದರೆ ಸೆ. 21ರಿಂದ ಮುಷ್ಕರದ ಎಚ್ಚರಿಕೆ

ಉಡುಪಿ: ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾ ಶಾಖೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ. ಎಚ್. ಪ್ರಕಾಶ್ ಕುಮಾರ್ ಶೆಟ್ಟಿ, ವೇತನ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಈಗಾಗಲೇ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಅಲ್ಲದೆ ಆಗಸ್ಟ್ 15ರೊಳಗೆ ಬೇಡಿಕೆಗಳನ್ನು ಈಡೇರದೆ ಇದ್ದಲ್ಲಿ ಹಂತ ಹಂತವಾಗಿ ಮುಷ್ಕರಕ್ಕೆ ಮೊರೆಹೋಗುವುದಾಗಿ ಸರ್ಕಾರಕ್ಕೆ ತಿಳಿಸಲಾಗಿತ್ತು ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ 7 ನೇ ವೇತನ ಆಯೋಗದ ವೇತನ ಶ್ರೇಣಿ ನೀಡಲಾಗಿದೆ. ಆದರೆ ಕೋವಿಡ್ 19 ತುರ್ತು ಪರಿಸ್ಥಿತಿಯಲ್ಲಿ ಹಗಲಿರುಳು ದುಡಿಯುತ್ತಿರುವ ಸರ್ಕಾರಿ ವೈದ್ಯಾಧಿಕಾರಿಗಳ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಆದ್ದರಿಂದ ಸೆ. 15ರಿಂದ 20ರ ವರೆಗೆ ಆನ್ ಲೈನ್ ಸಹಿತ ಎಲ್ಲಾ ಸರ್ಕಾರಿ ಸಭೆಗಳಿಂದ ದೂರು ಉಳಿಯುವುದು ಹಾಗೂ ಕೋವಿಡ್ 19 ಸಹಿತ ಎಲ್ಲಾ ಆರೋಗ್ಯ ಕಾರ್ಯಕ್ರಮಗಳ ಅನುಷ್ಟಾನ ವರದಿಗಳನ್ನು ಸರ್ಕಾರಕ್ಕೆ ನೀಡದಿರಲು ನಿರ್ಧರಿಸಲಾಗಿದೆ. ಆದರೆ ಸಾರ್ವಜನಿಕರು‌ ಹಾಗೂ ಬಡರೋಗಿಗಳ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗಿ ಆರೋಗ್ಯ ಸೇವೆ ಮುಂದುವರಿಸಲಾಗಿದೆ ಎಂದು ಹೇಳಿದರು.

ಒಂದು ವಾರದೊಳಗೆ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಸೆ. 21ರಿಂದ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು. ಹಾಗೆ ಬೆಂಗಳೂರು ಚಲೋ ಜಾಥಾ ಹಮ್ಮಿಕೊಂಡು ಮುಂದಿನ ನಡೆಯ ಬಗ್ಗೆ ರಾಜ್ಯಮಟ್ಟದಲ್ಲಿ ತೀರ್ಮಾನಿಸಲಾಗುವುದು ಎಂದರು.

ಸಂಘದ ಕಾರ್ಯದರ್ಶಿ ಡಾ. ನರಸಿಂಹ ನಾಯಕ್, ಸಂಘಟನಾ ಕಾರ್ಯದರ್ಶಿ ಡಾ. ಗೋಪಾಲ್ ಎಸ್.ಜಿ., ಉಪಾಧ್ಯಕ್ಷ ಡಾ. ಉಮೇಶ್ ನಾಯಕ್, ಸದಸ್ಯ ಡಾ. ರಂಜಿತ್, ಡಾ. ಪ್ರತಾಪ್ ಸುದ್ದಿಗೋಷ್ಠಿಯಲ್ಲಿ ಇದ್ದರು.