ಆರು ವರ್ಷಗಳಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತಿಗೆ ನಿರ್ಬಂಧ ಹೇರಲು ಕೇಂದ್ರ ಯೋಚನೆ: ಬೆಲೆ ಏರಿಕೆ ತಡೆಗಟ್ಟಲು ಕ್ರಮ

ನವದೆಹಲಿ: ಸಚಿವಾಲಯದ ಅಧಿಕಾರಿಗಳ ಪ್ರಕಾರ, ದೇಶೀಯ ಬೆಲೆಗಳ ಏರಿಕೆಯನ್ನು ತಡೆಗಟ್ಟಲು ಭಾರತ ಸರ್ಕಾರವು ಆರು ವರ್ಷಗಳಲ್ಲಿ ಮೊದಲ ಬಾರಿಗೆ ಸಕ್ಕರೆ ರಫ್ತುಗಳನ್ನು ನಿರ್ಬಂಧಿಸಲು ಯೋಚಿಸುತ್ತಿದೆ.

ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಬ್ರೆಜಿಲ್‌ನ ನಂತರ ಎರಡನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾದ ಭಾರತ, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ತಡೆಗಟ್ಟಲು ಸಕ್ಕರೆ ರಫ್ತನ್ನು 10 ಮಿಲಿಯನ್ ಟನ್‌ಗಳಿಗೆ ಸೀಮಿತಗೊಳಿಸಬಹುದು ಎಂದು ಸರ್ಕಾರಿ ಮೂಲವೊಂದು ಮಂಗಳವಾರ ತಿಳಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ, ಆಹಾರದ ಬೆಲೆಗಳು ಗಗನಕ್ಕೇರಿವೆ ಮತ್ತು ಪ್ರಪಂಚದಾದ್ಯಂತದ ಸರ್ಕಾರಗಳು ಕೆಲವು ಸರಕುಗಳ ದೇಶೀಯ ಬೆಲೆಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಜೂನ್ 1 ರಿಂದ ಒಂದು ತಿಂಗಳ ಮಟ್ಟಿಗೆ 3.6 ಮಿಲಿಯನ್ ಕೋಳಿಗಳ ರಫ್ತನ್ನು ನಿಲ್ಲಿಸಲು ಮಲೇಷ್ಯಾ ನಿರ್ಧರಿಸಿದೆ. ಇಂಡೋನೇಷ್ಯಾ ಇತ್ತೀಚೆಗೆ ತಾಳೆ ಎಣ್ಣೆ ರಫ್ತುಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಭಾರತವು ಗೋಧಿ ರಫ್ತುಗಳನ್ನು ನಿರ್ಬಂಧಿಸಿದೆ. ಸೆರ್ಬಿಯಾ ಮತ್ತು ಕಝಾಕಿಸ್ತಾನ್ ಧಾನ್ಯ ಸಾಗಣೆಗೆ ಕೋಟಾಗಳನ್ನು ವಿಧಿಸಿವೆ.

“10 ಮಿಲಿಯನ್ ಟನ್‌ಗಳ ಮಾಂತ್ರಿಕ ಅಂಕಿಅಂಶವನ್ನು ದಾಟದಂತೆ ರಫ್ತುಗಳನ್ನು ಮೇಲ್ವಿಚಾರಣೆ ಮಾಡಲು ಸರ್ಕಾರ ಬಯಸುತ್ತದೆ. 10 ಮಿಲಿಯನ್ ಟನ್‌ಗಳಿಗೆ ಸಂಬಂಧಿಸಿದಂತೆ ನಾವು ನಿಜವಾಗಿಯೂ ಇದನ್ನು ಸಾಧಿಸಬಹುದೇ ಅಥವಾ ಇಲ್ಲವೇ ಎಂಬ ಗಂಭೀರ ಅನುಮಾನಗಳನ್ನು ಹೊಂದಿದ್ದೇವೆ. ಮೊದಲನೆಯದಾಗಿ, ಇಂದಿನವರೆಗೆ ಕೇವಲ 7.2 ಮಿಲಿಯನ್ ಟನ್ ಸಕ್ಕರೆಯನ್ನು ಮಾತ್ರ ರಫ್ತು ಮಾಡಲಾಗಿದೆ ಮತ್ತು ಒಮ್ಮೆ ಮಳೆಗಾಲದ ಪ್ರಾರಂಭವಾಯಿತೆಂದರೆ ರಫ್ತಿನ ಪ್ರಮಾಣ ಯಾವುದೇ ಸಂದರ್ಭದಲ್ಲಿ ಇಳಿಕೆಯಾಗುತ್ತದೆ” ಎಂದು ಶ್ರೀ ರೇಣುಕಾ ಶುಗರ್ಸ್ನ ಅತುಲ್ ಚತುರ್ವೇದಿ ದ ಎಕೊನಾಮಿಕ್ಸ್ ಟೈಮ್ಸ್ ನೌ ಗೆ ತಿಳಿಸಿದ್ದಾರೆ.