ಸರ್ಕಾರಿ ನೌಕರರ ಹಿತ ಕಾಯಲು ಸರ್ಕಾರ ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ಸರ್ಕಾರದ ಮುಖ್ಯಸ್ಥನಾಗಿ ಸರ್ಕಾರಿ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವುದು ನನ್ನ ಕರ್ತವ್ಯ. 7 ನೇ ವೇತನ ಆಯೋಗವನ್ನು ಸದ್ಯ ರಚಿಸಲಾಗಿದ್ದು, ಸರ್ಕಾರಿ ನೌಕರರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ನೌಕರರು ಪ್ರತಿ ದಿನ ಒಂದು ತಾಸು ಹೆಚ್ಚು ಕೆಲಸ ಮಾಡುವ ಮೂಲಕ ರಾಜ್ಯದ ಪ್ರಗತಿಗೆ ಹೆಚ್ಚಿನ ಕೊಡುಗೆಯನ್ನು ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

7 ನೇ ವೇತನ ಆಯೋಗವನ್ನು ಐದು ವರ್ಷಗಳಲ್ಲೆ ಮಾಡಿರುವ ದಾಖಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತಿದ್ದು, ಸರ್ಕಾರಿ ನೌಕರರ ಅವಶ್ಯಕತೆಗಳು ಕೆಲಸಕ್ಕೆ ಸೇರಿದಾಗ ಇರುವುದರಿಂದ ಈಗ ಭಿನ್ನವಾಗಿದ್ದು, ಖರ್ಚು ವೆಚ್ಚಗಳು ಹೆಚ್ಚಾಗಿವೆ. ಸಮಯ ಮತ್ತು ಹಣ ಬಹಳ ಮುಖ್ಯವಾಗಿದ್ದು, ಸರಿಯಾದ ಸಮಯದಲ್ಲಿ ಸರಿಯಾದ ಸಂಪಾದನೆಯಾದಲ್ಲಿ ಬದುಕಿಗೆ ಪ್ರಯೋಜನವಾಗಲಿದೆ. ಹೀಗಾಗಿ ಇದನ್ನು ಕೂಡಲೆ ಮಾಡಬೇಕೆಂದು ತೀರ್ಮಾನಿಸಲಾಗಿದ್ದು, ಪಕ್ಷದ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪನವರ ಒತ್ತಾಸೆ ಮೇರೆಗೆ ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದ ಅವರು, 7 ನೇ ವೇತನ ಆಯೋಗದ ವರದಿಗಾಗಿ ಸುಧಾಕರ್ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ಸರ್ಕಾರಿ ನೌಕರರಿಗೆ ಬೇಕಾಗುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು. ಸರಕಾರಿ ನೌಕರರು ಕೂಡಾ ಪ್ರತಿ ದಿನ ಒಂದು ತಾಸು ಹೆಚ್ಚು ಕೆಲಸ ಮಾಡಬೇಕು ಮತ್ತು ರಾಜ್ಯದ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಬೇಕು. ಸರ್ಕಾರಿ ನೌಕರರ ಏನೇ ಸಮಸ್ಯೆಗಳಿದ್ದರೂ ಪರಿಹರಿಸಲಾಗುವುದು. ಇಬ್ಬರೂ ಸೇರಿ ಸುಭಿಕ್ಷ ನಾಡು ಕಟ್ಟೋಣ. ಪ್ರಾಮಾಣಿಕತೆ, ನಿಷ್ಠೆ ಮತ್ತು ಕರ್ತವ್ಯಪ್ರಜ್ಞೆಯಿಂದ ದಿನಕ್ಕೆ ಒಂದು ಗಂಟೆ ಹೆಚ್ಚು ದುಡಿಯಬೇಕು. ಬಡವರ ದೀನ-ದಲಿತರ ಮತ್ತು ತುಳಿತಕ್ಕೊಳಗಾದವರ ಕೆಲಸಗಳನ್ನು ಸರ್ಕಾರಿ ನೌಕರರು ಧೈರ್ಯದಿಂದ ಮಾಡಬೇಕು ಎಂದು ಅವರು ಕರೆನೀಡಿದರು.