ನವದೆಹಲಿ: ಡಿಜಿಟಲ್ ವಂಚನೆಯನ್ನು ತಡೆಗಟ್ಟಲು ಸರ್ಕಾರವು ಸಿಮ್ ಕಾರ್ಡ್ ಡೀಲರ್ಗಳ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಬಲ್ಕ್ ಸಿಮ್ ‘ಕನೆಕ್ಷನ್’ಗಳನ್ನು ನೀಡುವ ನಿಬಂಧನೆಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ.
ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ವೈಷ್ಣವ್, ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್ ಪರಿಶೀಲನೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಹೇಳಿದ್ದಾರೆ.
ಸಿಮ್ ಕಾರ್ಡ್ ಡೀಲರ್ ಪರಿಶೀಲನೆಯನ್ನು ‘ಪರವಾನಗಿದಾರ’ ಅಥವಾ ಸಂಬಂಧಪಟ್ಟ ಸಿಮ್ ಕಂಪನಿ ಮಾಡಲಿದೆ ಎಂದು ಸ್ಪಷ್ಟಪಡಿಸಿರುವ ಅವರು ಈ ಕಾನೂನಿನ ಉಲ್ಲಂಘನೆಯಾದಲ್ಲಿ 10 ಲಕ್ಷ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ಸಿಮ್ ಕಾರ್ಡ್ ಸಂಬಂಧಿತ ಡಿಜಿಟಲ್ ವಂಚನೆಗಳ ವಿರುದ್ಧ ಸಮಗ್ರ ಕ್ರಮದಲ್ಲಿ ಸರ್ಕಾರವು 52 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದೆ. 67,000 ಡೀಲರ್ ಹೆಸರುಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮೇ 2023 ರಿಂದ, ಸಿಮ್ ಕಾರ್ಡ್ ವಿತರಕರ ವಿರುದ್ಧ 300 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ವಂಚನೆಯ ಕೃತ್ಯಗಳಲ್ಲಿ ಭಾಗಿಯಾಗಿರುವ ಸುಮಾರು 66,000 ಖಾತೆಗಳನ್ನು ವಾಟ್ಸಾಪ್ ಸ್ವತಃ ನಿರ್ಬಂಧಿಸಿದೆ ಎಂದು ವೈಷ್ಣವ್ ಹೇಳಿದ್ದಾರೆ.
ಪ್ರತಿ ಅರ್ಜಿದಾರರ ವಿವರಗಳನ್ನು ಮತ್ತು ಅವರ ವ್ಯವಹಾರ ಸಂಬಂಧಿತ ದಾಖಲೆಗಳನ್ನು ಡೀಲರ್ ಅನ್ನು ನೇಮಿಸುವ ಮೊದಲು ಟೆಲಿಕಾಂ ಕಂಪನಿಗಳು ಪರಿಶೀಲನೆಗಾಗಿ ಸಂಗ್ರಹಿಸುತ್ತಾರೆ. ಮೊದಲು ಈ ನಿಯಮದಲ್ಲಿ ವಿತರಕರ ವಿವರವಾದ ದಾಖಲಾತಿಯನ್ನು ಸೇರಿಸಲಾಗಿರಲಿಲ್ಲ. 10 ಲಕ್ಷ ಸಿಮ್ ಡೀಲರ್ ಗಳಿದ್ದು, ಪರಿಶೀಲನೆಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬೃಹತ್ ಪ್ರಮಾಣದಲ್ಲಿ ‘ಕನೆಕ್ಷನ್’ ನೀಡುವ ಸೇವೆಯನ್ನು ಸ್ಥಗಿತಗೊಳಿಸಿ ಬದಲಾಗಿ, ವ್ಯಾಪಾರ ಸಂಪರ್ಕಗಳ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು. ಇದರೊಂದಿಗೆ ವ್ಯವಹಾರಗಳ KYC (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಮತ್ತು SIM ತೆಗೆದುಕೊಳ್ಳುವ ವ್ಯಕ್ತಿಯ KYC ಅನ್ನು ಸಹ ಮಾಡಲಾಗುತ್ತದೆ KYC ಸಂಸ್ಥೆ ಅಥವಾ ಹೂಡಿಕೆದಾರರ ಗುರುತು ಮತ್ತು ವಿಳಾಸವನ್ನು ದೃಢೀಕರಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದ್ದಾರೆ.