ಉಡುಪಿ: ಜನರಿಂದ ಜನರಿಗೋಸ್ಕರ ಇರುವ ಸರ್ಕಾರ ಜನಸಾಮಾನ್ಯರನ್ನು ಕೇಂದ್ರವನ್ನಾಗಿಟ್ಟುಕೊಂಡು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಇವುಗಳನ್ನು ಅನುಷ್ಠಾನಗೊಳಿಸುವ ಕೆಲಸ ಕಾರ್ಯಾಂಗದ್ದಾಗಿದ್ದು, ಇದರ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿರುತ್ತದೆ. ಇದನ್ನು ಅರಿತು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಬಹುಪಾಲು ಜನರು ಸರ್ಕಾರದಿಂದ ಹೆಚ್ಚೇನೂ ನಿರೀಕ್ಷಿಸದೇ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುತ್ತಿರುತ್ತಾರೆ. ಸರ್ಕಾರದಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾತ್ರ ಅಪೇಕ್ಷಿಸುವ ಅವರ ನಿರೀಕ್ಷೆಗೆ ತಕ್ಕಂತೆ ನಾವು ಸ್ಪಂದಿಸಬೇಕು ಎಂದು ಉಡುಪಿ ಜಿಲ್ಲೆಯ ಪ್ರಥಮ ಜಿಲಾಧಿಕಾರಿ(ಈಗ ನಿವೃತ್ತ) ಕಲ್ಪನಾ ಹೇಳಿದರು.
ಅವರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉತ್ತಮ ಆಡಳಿತ ಸಪ್ತಾಹದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ವರ್ಚುವಲ್ ಮೂಲಕ ಮಾತನಾಡಿದರು.
ಆಧುನಿಕತೆಯ ಈ ಯುಗದಲ್ಲಿ ತಾಂತ್ರಿಕತೆಯು ತುಂಬಾ ಮುಂದುವರೆದಿದ್ದು, ಇದರ ಸದ್ಬಳಕೆಯಿಂದ ಆಡಳಿತ ಕಾರ್ಯಗಳನ್ನು ವಿಳಂಬವಿಲ್ಲದೇ ಪಾರದರ್ಶಕತೆಯೊಂದಿಗೆ ಅನುಷ್ಠಾನಗೊಳಿಸಬೇಕು ಎಂದ ಅವರು, ನೌಕರರು ತಮ್ಮ ಸೇವೆಯ ಅವಧಿಯಲ್ಲಿ ಸೇವಾ ಮನೋಭಾವದಿಂದ ವಿಶೇಷ ಕಾಳಜಿಯಿಂದ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದರು.
ಉತ್ತಮ ಆಡಳಿತ ಸೇವೆಯನ್ನು ಒದಗಿಸಿದಾಗ ಮಾತ್ರ ಜನರ ಸಂಕಷ್ಟಗಳು ದೂರವಾಗುತ್ತವೆ. ಈ ದಿಸೆಯಲ್ಲಿ ನಾವೆಲ್ಲರೂ ನಮ್ಮ ದೈನಂದಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು.
ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಯತೀಶ್ ಮಾತನಾಡಿ, ಅಡಳಿತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವಾಗ ಸ್ಥಳೀಯ ಜನರ ಅಭಿಲಾಷೆಗೆ ತಕ್ಕಂತೆ ಹೊಸ ಆಲೋಚನೆಗಳೊಂದಿಗೆ ಜನರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಿದಾಗ ಅಸಾಧ್ಯವಾದದ್ದನ್ನು ಸಹ ಅನುಷ್ಠಾನಗೊಳಿಸಲು ಸಾಧ್ಯ ಎಂಬ ಹಲವು ನಿದರ್ಶನಗಳನ್ನು ಹಂಚಿಕೊಳ್ಳುವುದರೊಂದಿಗೆ ನಾವೂ ಸಹ ಆ ರೀತಿಯಲ್ಲಿಯೇ
ಕಾರ್ಯನಿರ್ವಹಿಸಬೇಕು ಎಂದರು.
ಉತ್ತಮ ಆಡಳಿತದಿಂದಾಗಿ ಜಿಲ್ಲೆಯಲ್ಲಿ ನಡೆದಿರುವ ಎಂ.ಆರ್.ಎಫ್ ಘಟಕದ ಕಾರ್ಯವಿಧಾನ, ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಿರುವ ಸೌಲಭ್ಯಗಳು ಹಾಗೂ ಕಸ ನಿರ್ವಹಣೆಯಲ್ಲಿ ಬ್ಲಾಕ್ಸ್ಪಾಟ್ಗಳ ನಿರ್ಮೂಲನೆ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಯೋಜನಾ ನಿರ್ದೇಶಕ ಬಾಬು ಹಾಗೂ ಜಿಲ್ಲೆಯ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.