ಬಾಂಬ್ ಸ್ಪೋಟ ವಿಚಾರದಲ್ಲಿ ರಾಜಕೀಯವಿಲ್ಲ; ಸರ್ಕಾರ ತನಿಖೆಯಲ್ಲಿ ವಿಳಂಬ ತೋರುವುದು ತರವಲ್ಲ: ಬಿ.ವೈ ವಿಜಯೇಂದ್ರ

ಬೆಂಗಳೂರು: ಬಾಂಬ್ ಸ್ಫೋಟ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ಎಸ್ಎಲ್ ವರದಿ ಬಂದಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು, ದೃಢಪಟ್ಟ ಮಾಹಿತಿ ನಮಗಿದೆ. ಎಲ್ಲೋ ಒಂದು ಕಡೆ ಈ ರಾಜ್ಯ ಸರ್ಕಾರದ ವಿಳಂಬ ನೀತಿ, ನಡವಳಿಕೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬಂತಿದೆ. ದೇಶದ್ರೋಹಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬೋಗಸ್ ಎಫ್‍ಎಸ್‍ಎಲ್ ವರದಿ ತಯಾರಿಸುವ ಅನುಮಾನ ಕಾಡುವಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಸಚಿವರ ಹೇಳಿಕೆಗಳು ಕೇವಲ ಬಿಜೆಪಿ ಮಾತ್ರವಲ್ಲ, ಸಾಮಾನ್ಯ ಜನರಿಗೂ ವಿಶ್ವಾಸ ಹುಟ್ಟಿಸುವಂತಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ ದೇಶದ್ರೋಹಿಗಳ ಬಗ್ಗೆ ಸಚಿವರು ‘ಆ ರೀತಿ ಘೋಷಣೆ ಕೂಗಿಯೇ ಇಲ್ಲ’ ಎಂದಿದ್ದರು. ‘ಬಿಜೆಪಿಯವರಿಗೆ ಮಾಡುವುದಕ್ಕೆ ಕೆಲಸ ಇಲ್ಲ’ ಎಂದಿದ್ದರು. ವಿಧಾನಸೌಧಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಫೂಟೇಜ್ ಗಮನಿಸಿ ಅರ್ಧ ಗಂಟೆಯಲ್ಲಿ ಅವರನ್ನೆಲ್ಲ ಹಿಡಿದು ಒಳಗೆ ಹಾಕಬೇಕಿತ್ತು. ಅದನ್ನೂ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಎಫ್ಎಸ್ಎಲ್ ವರದಿ ಗಮನಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಘಟನೆ ನಡೆದು ನಾಲ್ಕೈದು ದಿನ ಕಳೆದಿದೆ. ಇವತ್ತಿಗೂ ಎಫ್‍ಎಸ್‍ಎಲ್ ವರದಿ ಬಂದಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಎಫ್‍ಎಸ್‍ಎಲ್ ವರದಿ ಬಂದಿದೆ. ಪಾಕ್ ಪರ ಘೋಷಣೆ ದೃಢವಾಗಿದೆ ಎಂದು ಪತ್ರಿಕೆಗಳು, ಮಾಧ್ಯಮಗಳು ವರದಿ ಮಾಡಿವೆ. ಇದರ ಮಧ್ಯೆ ಮುಖ್ಯಮಂತ್ರಿಗಳು ಎಫ್‍ಎಸ್‍ಎಲ್ ವರದಿ ಬಂದೇ ಇಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ ಎಂದರು.

ಇಂಥಹ ಘಟನೆಗಳಿಂದ ರಾಜ್ಯದ ಜನರಲ್ಲೂ ಆತಂಕ ಕಾಡುತ್ತಿದೆ. ಎಷ್ಟು ಗಂಭೀರವಾಗಿ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕೋ, ಇಂಥ ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಎಷ್ಟು ಗಂಭೀರವಾಗಿ ವರ್ತಿಸಬೇಕೋ ಅಂಥ ಗಂಭೀರತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್ ಘಟನೆ ಕುರಿತು ನಿರ್ಧರಿಸಲು 5 ದಿನ ಬೇಕೇ? ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಹಾದಿಬೀದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ್ದಲ್ಲ. ವಿಧಾನಸೌಧದಲ್ಲಿ ಕೂಗಿರುವಾಗ ದೇಶದ್ರೋಹಿಗಳನ್ನು ಬಂಧಿಸಿಲ್ಲವೆಂದರೆ ನಿಮ್ಮ ಇಚ್ಛಾಶಕ್ತಿ ಕೊರತೆಯೇ? ಅಥವಾ ದೇಶದ್ರೋಹಿಗಳನ್ನು ರಕ್ಷಿಸುವ ಪ್ರಯತ್ನದ ಜೊತೆಗೆ, ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ಆಗುವುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೇ? ಅದನ್ನು ಸ್ಪಷ್ಟವಾಗಿ ಹೇಳಿ ಎಂದು ಆಗ್ರಹಿಸಿದ್ದಾರೆ.

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಮತ್ತು ಸಚಿವರ ಹೇಳಿಕೆಗಳು, ಶಿವಮೊಗ್ಗದ ಟಿಪ್ಪು ಜಯಂತಿ ಸಂದರ್ಭದಲ್ಲಿ ದೇಶದ್ರೋಹಿಗಳ ಅಟ್ಟಹಾಸ, ಕುಕ್ಕರ್ ಬ್ಲಾಸ್ಟ್‌ನಲ್ಲಿ ಅಪರಾಧಿಗಳನ್ನು ಅಮಾಯಕರೆಂದು ಬಿಂಬಿಸುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗಳು ರಾಜ್ಯದಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತಿದೆ. ಗೌರವಾನ್ವಿತ ಮುಖ್ಯಮಂತ್ರಿಗಳು, ಸರ್ಕಾರದ ಇಂಥ ಘಟನೆಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಏನೂ ಆಗಿಯೇ ಇಲ್ಲ ಎಂಬಂತೆ ಸಚಿವರು ಮನಸೋ ಇಚ್ಛೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.