ನವದೆಹಲಿ: ತ್ರಿವರ್ಣ ಧ್ವಜವನ್ನು ತೆರೆದ ಸ್ಥಳಗಳು ಮತ್ತು ವೈಯಕ್ತಿಕ ಮನೆಗಳು ಅಥವಾ ಕಟ್ಟಡಗಳ ಮೇಲೆ ಹಗಲು ರಾತ್ರಿ ಪ್ರದರ್ಶಿಸಲು ಅನುಮತಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿದೆ. ಮುಂಚಿನ ನಿಬಂಧನೆಗಳ ಪ್ರಕಾರ, ರಾಷ್ಟ್ರ ಧ್ವಜವನ್ನು ತೆರೆದ ಸ್ಥಳದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಪ್ರದರ್ಶಿಸಲು ಅವಕಾಶವಿತ್ತು. ಸೂರ್ಯಾಸ್ತದ ಬಳಿಕ ರಾಷ್ಟ್ರಧ್ವಜವನ್ನು ತೆರೆದ ಸ್ಥಳಗಳಲ್ಲಿ ಹಾರಿಸಲು ಅನುಮತಿ ಇರಲಿಲ್ಲ.
ಈಗ, ಸಾರ್ವಜನಿಕರು, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಗಳು ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಅನುಗುಣವಾಗಿ ಎಲ್ಲಾ ದಿನಗಳಲ್ಲಿ ಮತ್ತು ಯಾವುದೇ ಸಂದರ್ಭಗಳಲ್ಲಿ ಧ್ವಜಾರೋಹಣ ಮಾಡಲು ಅನುಮತಿ ನೀಡಲಾಗಿದೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕ್ರಮವನ್ನು ಜಾರಿಗೆ ತರಲಾಗಿದೆ.
ಭಾರತದ ಧ್ವಜ ಸಂಹಿತೆಯನ್ನು ಈ ಹಿಂದೆ ಡಿಸೆಂಬರ್ 30, 2021 ರಂದು ತಿದ್ದುಪಡಿ ಮಾಡಲಾಗಿತ್ತು. ಕೈಯಿಂದ ನೇಯ್ದ ಮತ್ತು ಯಂತ್ರ-ನಿರ್ಮಿತ ಧ್ವಜಗಳನ್ನು ತಯಾರಿಸಲು ಹತ್ತಿ, ಉಣ್ಣೆ, ರೇಷ್ಮೆ ಮತ್ತು ಖಾದಿಯ ಹಾಗೂ ಪಾಲಿಯೆಸ್ಟರ್ ಧವಜದ ಬಳಕೆಯನ್ನು ಈಗಿನ ಸಂಹಿತೆ ಅನುಮತಿಸುತ್ತದೆ.
ಆಗಸ್ಟ್ 13 ಮತ್ತು 15 ರ ನಡುವೆ ತ್ರಿವರ್ಣ ಧ್ವಜವನ್ನು ಹಾರಿಸಲು ಅಥವಾ ಅದನ್ನು ತಮ್ಮ ಮನೆಗಳಲ್ಲಿ ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ್ದಾರೆ. ಈ ವರ್ಷ ರಾಷ್ಟ್ರವು ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿರುವುದರಿಂದ ಈ ‘ಹರ್ ಘರ್ ತಿರಂಗಾ’ ಆಂದೋಲನವು ರಾಷ್ಟ್ರಧ್ವಜದೊಂದಿಗೆ ನಮ್ಮ ಸಂಪರ್ಕವನ್ನು ಇನ್ನಷ್ಟು ಗಾಢವಾಗಿಸುತ್ತದೆ ಎಂದು ಮೋದಿ ಹೇಳಿದ್ದಾರೆ.