ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಅಥವಾ ಗ್ರಾಮದಲ್ಲಿಯೇ ಆದರೂ ಗೋಹತ್ಯೆ ಕಂಡುಬಂದಲ್ಲಿ ಕೂಡಲೇ ‘1962’ ಕ್ಕೆ ಕರೆ ಮಾಡಿ ದೂರು ದಾಖಲಿಸುವಂತೆ ಸಚಿವ ಪ್ರಭು ಚೌವ್ಹಾಣ್ ಮನವಿ ಮಾಡಿಕೊಂಡಿದ್ದಾರೆ.
ಈ ಕಾಯ್ದೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚಿಸ ಲಾಗಿದೆ. ಕಸಾಯಿಖಾನೆಗೆ ಒಯ್ಯುವಾಗ ರಕ್ಷಿಸಲಾದ ಗೋವುಗಳನ್ನು ಸಾಕಲು ಸಾರ್ವಜನಿಕರು ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ಗೋವುಗಳ ರಕ್ಷಣೆಗಾಗಿ ಈಗಾಗಲೇ ಪಶು ಸಂಜೀವಿನ ಸಹಾಯವಾಣಿ (1962) ಇದ್ದು, ರಾಜ್ಯದಲ್ಲಿ ಗೋಹತ್ಯೆ ಕಂಡು ಬಂದ ಕೂಡಲೇ ಕರೆ ಮಾಡಿ ದೂರು ದಾಖಲಿಸಬಹುದು. ಕೂಡಲೇ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಮಾಡುತ್ತಾರೆ. ಅಕ್ರಮವಾಗಿ ಗೋವುಗಳನ್ನು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಹಾಗೂ ಭಾರೀ ಮೊತ್ತದ ದಂಡವನ್ನೂ ವಿಧಿಸಲಾಗುತ್ತದೆ. ಬುಧವಾರದಿಂದ ಕಾಯ್ದೆ ಜಾರಿಗೆ ಬಂದಿದ್ದು, ರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಗಳಿಗೆ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಮಟ್ಟದಲ್ಲಿ ಎಲ್ಲಾ ತಾಲೂಕುಗಳಲ್ಲೂ ಗೋಶಾಲೆಗಳನ್ನು ತೆರೆಯಲು ಚಿಂತನೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.












