ಗೋಪುರಕ್ಕೆ ಡಿಕ್ಕಿ ಹೊಡೆದ ಕಾರು: ಪಾನಮತ್ತರಾಗಿದ್ದ ಇಬ್ಬರು ಗಂಭೀರ

ಉಡುಪಿ: ಇಲ್ಲಿನ ಚಿತ್ತರಂಜನ್ ಸರ್ಕಲ್ ಬಳಿ ಇರುವ ವೃತ್ತ ಗೋಪುರಕ್ಕೆ ಸೋಮವಾರ ತಡರಾತ್ರಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಕಾರಿನಲ್ಲಿ ಐದು ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರು ಪಾನಮತ್ತರಾಗಿದ್ದರು. ಚಾಲಕ ಕೂಡ ಪಾನಮತ್ತನಾಗಿದ್ದು, ಅತೀ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಒಳಕಾಡು ನಿವಾಸಿಗಳಾದ ವೇಂಕಟೇಶ ಪ್ರಭು (47), ಸಂತೋಷ್ ಶೇಟ್ (42 ) ಎಂದು ಗುರುತಿಸಲಾಗಿದೆ.
ಈ ಇಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ ನಗರದ ಆದರ್ಶ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಕುಡಿತದ ಅಮಲಿನಲ್ಲಿದ್ದ ಉಳಿದ ಮೂವರು, ಸ್ಥಳದಲ್ಲಿ ಸೇರಿರುವ ಜನರಕಂಡು ಮುಜುಗರದಿಂದಾಗಿ ಗಾಯಾಳು ಮಿತ್ರರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಉಡುಪಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.