ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ನೂತನ ಆಡಳಿತ ಸಮಿತಿ: ಮಾಜಿ ಶಾಸಕ ಗೋಪಾಲ ಪೂಜಾರಿ ಗರಂ, ಖಡಕ್ ವಾರ್ನಿಂಗ್

ಕುಂದಾಪುರ: ಸರಕಾರದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಈಗಿರುವ ವ್ಯವಸ್ಥಾಪನ ಸಮಿತಿ ರದ್ಧುಮಾಡಿ ನೂತನ ಆಡಳಿತ ಸಮಿತಿ ತರಬೇಕೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶದ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪ್ರತಿಕ್ರಿಯಿಸಿದ್ದು ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ  ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಆದೇಶದ ಹಿನ್ನೆಲೆ ಕಡತ ಸಿದ್ದವಾಗುತ್ತಿದ್ದು ಇನ್ನೆರಡು ದಿನಗಳಲ್ಲಿ ಪ್ರಕ್ರಿಯೆ ಪೂರ್ಣವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಎಲ್ಲವೂ ನಡೆಯುತ್ತಿದ್ದು ಇದರಲ್ಲಿ ರಾಜಕೀಯ ದ್ವೇಷವಿಲ್ಲ. ಯಾವುದೇ ಪೂರ್ವಾಗ್ರಹ ಪೀಡಿತವಾಗಿಲ್ಲದೇ ಯೋಜನಾಬದ್ಧವಾಗಿ ಈ ಆದೇಶ ಪಾಲನೆ ಮಾಡುತ್ತೇವೆ. ದೇವಸ್ಥಾನಗಳಲ್ಲಿ ಕೆಲವು ಕಡೆ ಅವ್ಯವಸ್ಥೆಯಾದ ಬಗ್ಗೆ ಅನೇಕ ದೂರಿನ ಹಿನ್ನೆಲೆ ಸಿಎಂ ಈ ಆದೇಶ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರಕಾರವಿದ್ದಾಗಲೂ ಬಿಜೆಪಿ ಸರಕಾರದ ವ್ಯವಸ್ಥಾಪನ ಸಮಿತಿ ರದ್ಧು ಮಾಡಿತ್ತೆಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಪರಿವರ್ತನೆ ಜಗದ ನಿಯಮ. ಸಮಗ್ರ ಅಭಿವ್ರದ್ದಿಗಾಗಿ ನಮ ಸರಕಾರ ತೆಗೆದುಕೊಂಡ ದಿಟ್ಟ ನಿರ್ಧಾರ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬೈಂದೂರು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಕೆ. ಗೋಪಾಲ ಪೂಜಾರಿ, ಬಿಜೆಪಿ ದ್ವೇಷ ರಾಜಕಾರಂಅ ಮಾಡುತ್ತಿದೆ. ವ್ಯವಸ್ಥಾಪನ ಸಮಿತಿಗೆ ೩ ವರ್ಷ ಸಮಯ ನಿಗದಿಯಾಗಿದ್ದರೂ ಕೂಡ ಕಾನೂನು ಉಲ್ಲಂಘನೆ ಮಾಡುತ್ತಾರೆ. ಅಧಿಕಾರ ಬಂದಾಗ ದೇವಾಲಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಇವರ ಹುನ್ನಾರವಾಗಿದೆ. ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಇನ್ನೂ ಏಳು ತಿಂಗಳಿದೆ. ಅವ್ಯವಹಾರ ಅಥವಾ ಆರೋಪಗಳಿದ್ದರೆ ತನಿಖೆಯಾಗಲಿ. ಬಿಜೆಪಿ ಈ ಕ್ರಮದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವೆ ಎಂದರು.