ಮರೆಯಾದ ಪ್ರಾಮಾಣಿಕ ರಾಜಕಾರಣದ ಸಾಕ್ಷಿ ಪ್ರಜ್ಞೆ: ಗೋಪಾಲ ಭಂಡಾರಿ ಅವರಿಗೆ ಉಡುಪಿ Xpress ನುಡಿ ನಮನ

ಅವರ ಕಚೇರಿಯ ಮುಂದೆ ಯಾವುದೋ ದೂರದ ಊರುಗಳಿಂದ ಸಮಸ್ಯೆಗಳ ಅರ್ಜಿಗಳನ್ನು ಹಿಡಿದುಕೊಂಡು ಬರುವ ಸಾಮಾನ್ಯ ಮನುಷ್ಯರು ಯಾವಾಗ ನೋಡಿದರೂ ಇರುತ್ತಿದ್ದರು. ಅವರೆಂದೂ ಆ ಮನುಷ್ಯರನ್ನು ಖಾಲಿ ಕೈಯಲ್ಲಿ ಕಳಿಸಲಿಲ್ಲ. ತಾವು ಕಷ್ಟದಲ್ಲಿದ್ದರೂ ಒಂದಷ್ಟು ಧನ ಸಹಾಯ ಮಾಡಿ ಸಮಾಧಾನ ಹೇಳಿಯೇ ಕಳುಹಿಸುತ್ತಿದ್ದರು. ಮಾಜಿ ಶಾಸಕನಾದರೂ ಅವರ ಕಚೇರಿಯ ಮುಂದೆ ಪಾಪದ ಕೈಗಳು ಸಹಾಯಾಸ್ತ ಬೇಡಿಕೊಂಡು ಬಂದಾಗೆಲ್ಲ ಇವರು ಮಿಡಿಯುತ್ತಿದ್ದರು.

ಚಿತ್ರ:ಸಂಪತ್ ನಾಯಕ್

ನಿಜ. ಬಡವರ ಕಷ್ಟಗಳಿಗೆ ಮಿಡಿಯುತ್ತಿದ್ದ ಕಾರ್ಕಳದ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ಗುರುವಾರ ನಮ್ಮಿಂದ ಮರೆಯಾಗಿದ್ದಾರೆ. ಭಂಡಾರಿ ಇನ್ನಿಲ್ಲ ಎನ್ನುವ ಸುದ್ದಿ ಕೇಳುತ್ತಿದ್ದಂತೆಯೇ ಯಾರೂ ನಂಬುವ ಸ್ಥಿತಿಯಲ್ಲಿಯೇ ಇರಲಿಲ್ಲ. ಯಾಕೆಂದರೆ ಅವರದ್ದು ಸಾಯುವ ವಯಸ್ಸಲ್ಲ. ಮೂರೋತ್ತು ಕಚೇರಿಯಲ್ಲಿಯೇ ಕೂತು ಅದೂ ಇದೂ ಕೆಲಸ ಮಾಡುತ್ತ, ಪಾಪದವರಿಗೆ ಏನಾದರೂ ಮಾಡಲು ಸಾಧ್ಯವಾ ಅಂತ ಯೋಚಿಸುತ್ತಾ, ಯಾವುದೇ ಸ್ವಾರ್ಥವಿಲ್ಲದೇ ಕ್ರೀಯಾಶೀಲರಾಗಿದ್ದ ಅವರೀಗ ಇಲ್ಲ ಎಂದಾಗ ಕಾರ್ಕಳದ ಜನತೆ ನಂಬೋದು ಹೇಗೆ?

ಆದರೆ ಇದೀಗ ಅವರು ಇಹಲೋಕ ತ್ಯಜಿಸಿದ್ದಾರೆ ಅಂದ ಸುದ್ದಿ ಕೇಳಿದ ಕೂಡಲೇ ಅವರಿಂದ ಸಹಾಯ ಪಡೆದವರು, ಅವರರಿಂದ ಧೈರ್ಯದ ನುಡಿ ಕೇಳಿದವರೆಲ್ಲಾ ಕುಗ್ಗಿ ಹೋಗಿದ್ದಾರೆ. ಯಾವಾಗಲೂ ಒಂದು ನೆಮ್ಮದಿಯ ಮೌನದಿಂದ ತುಂಬಿಕೊಂಡಿರುತ್ತಿದ್ದ, ಅವರ ಅಸ್ತಿತ್ವದಿಂದ ಕಷ್ಟಗಳನ್ನು ತೋಡಿಕೊಳ್ಳುವ ಪ್ರಾರ್ಥನಾ ಮಂದಿರದಂತೆ ಕಾಣುತ್ತಿದ್ದ ಅವರ ಕಚೇರಿಯಲ್ಲೀಗ ನೀರವತೆ ಬಿಟ್ಟು ಬೇರೇನೂ ಕೇಳಿಸುತ್ತಿಲ್ಲ.

ಗಿಮಿಕ್ಕಿಗೆ ಜೋತು ಬೀಳಲಿಲ್ಲ:

ಗೋಪಾಲ ಭಂಡಾರಿ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಈ ಕಾಲದ ಹುಡುಗರು ಅವರ ಪ್ರಾಮಾಣಿಕತೆ, ಔದಾರ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಭಂಡಾರಿಯವರ ಪ್ರಾಮಾಣಿಕತೆ, ಶುದ್ದ ರಾಜಕಾರಣ, ಅವರ ಸರಳ ವ್ಯಕ್ತಿತ್ವದ ಕುರಿತು ಕಾರ್ಕಳದ ಜನತೆಗೆ ಚೆನ್ನಾಗಿ ಗೊತ್ತಿತ್ತು. ಆದರೆ ಹಣ ಬಲದ ನಡುವೆ, ಈ ಕಾಲದ ರಾಜಕಾರಣದ ಹೊಸ ಗಿಮಿಕ್ಕುಗಳ ವೇಗದ ನಡುವೆ ಭಂಡಾರಿ ತಮ್ಮನ್ನು ಪ್ರಚಾರ ಮಾಡಿಕೊಳ್ಳಲು ಆಗದೇ ಸುಮ್ಮನುಳಿದರು. ಪ್ರಾಮಾಣಿಕತೆಗೆ, ನಿಷ್ಠೆ, ಸಂಯಮಗಳಿಗೆ ರಾಜಕಾರಣದಲ್ಲಿ ಬೆಲೆಯೇ ಇಲ್ಲ, ಇಲ್ಲೇನಿದ್ದರೂ ಧನ ಬಲವೇ ಬೇಕು ಎನ್ನುವ  ರಾಜಕೀಯ ವಾತಾವರಣವಿರೋವಾಗ ಧನ ಬಲವಿಲ್ಲದ ಭಂಡಾರಿಯವರು ಮೂಲೆಗುಂಪಾದರು. ಮೊನ್ನೆ ಮೊನ್ನೆ ರಾಜಕಾರಣಕ್ಕೆ ಬಂದು ಧನ ಬಲ ಪ್ರದರ್ಶಿಸಿದ ರಾಜಕಾರಣಿಗಳೆಲ್ಲಾ ಮುನ್ನೆಲೆಗೆ ಬಂದರು.

ಕಿರಿಯರ ಮಾರ್ಗದರ್ಶಿ:

ಗೋಪಾಲ ಭಂಡಾರಿ ವಿವಿಧ ಕ್ಷೇತ್ರದ ಕಿರಿಯರನ್ನು ವೈಯಕ್ತಿಕವಾಗಿ ಬೆಂಬಲಿಸುತ್ತಿದ್ದರು. ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕಿರಿಯರು ಸಹಾಯ ಕೇಳಿದರೆ ಆದಷ್ಟು ಸ್ಪಂದಿಸುತ್ತಿದ್ದರು. ನಿಜವಾದ ರಾಜಕಾರಣಿಗಳು ಮಾಡಬೇಕಾದ ಕೆಲಸ ಇದೇ  ಅಲ್ವಾ? ತಾವು ಹೋದದ್ದೇ ದಾರಿ, ಆಡಿದ್ದೇ ಆಟ, ಎನ್ನುವ ಅಹಂಕಾರದಲ್ಲಿ ಓಟು ಕೊಟ್ಟವರ ಹತ್ತಿರವೂ ಸುಳಿಯದ ರಾಜಕಾರಣಿಗಳೇ ಜಾಸ್ತಿ ಇರುವಾಗ, ತನಗೆ ಓಟು ಕೊಡದವರಿಗೂ ಸಹಾಯ ಮಾಡುತ್ತಿದ್ದ ಗೋಪಾಲ ಭಂಡಾರಿಯಂತಹ ರಾಜಾಕಾರಣಿಗಳು ಮತ್ತೆ ಕಾರ್ಕಳಕ್ಕೆ ಸಿಗಲಿಕ್ಕಿಲ್ಲ ಅನ್ನಿಸುತ್ತದೆ. ಒಂದು ಕಾಲದ ರಾಜಕಾರಣದ ಸಾಕ್ಷಿಪ್ರಜ್ಞೆಯೇ ಆಗಿದ್ದ, ತಾಳ್ಮೆ, ಪ್ರಾಮಾಣಿಕತೆ, ಸೋಲಿನಲ್ಲೂ ಕುಗ್ಗದ, ಗೆಲುವಿನಲ್ಲಿಯೂ ಬೀಗದ ಮನಃಸ್ಥಿತಿ ರಾಜಕಾರಣಿಗಳಿಗೆ ಬಹಳ ಮುಖ್ಯ ಅನ್ನುವ ಸತ್ಯದ ಹಾದಿಯಲ್ಲಿ ಬದುಕಿದ್ದ ಗೋಪಾಲ ಭಂಡಾರಿಯಂತಹ ರಾಜಾಕಾರಣಿಗಳು ಮತ್ತೆ ಕಾರ್ಕಳಕ್ಕೆ ಸಿಗಲಿಕ್ಕಿಲ್ಲ.

:ಪ್ರಸಾದ್ ಶೆಣೈ

———————

                     ಇವರು ಏನಂತಾರೆ?

ಸಾಮಾನ್ಯನ ಮದುವೆಗೂ ಬಂದರು:

ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟರೆ ಕೆಲವರಿಗೆ ನೆನಪಾಗುವುದಿಲ್ಲ, ಇನ್ನು ಕೆಲವು ಗಣ್ಯ ವ್ಯಕ್ತಿಗಳಿಗೆ ಕೈಯಲ್ಲಿ ಮದುವೆಯ ಆಮಂತ್ರಣ ಕೊಟ್ಟರೂ ಗೈರಾದವರು ಅನೇಕರಿದ್ದಾರೆ, ಕಾಲ್ ಮಾಡಿ ಆಮಂತ್ರಿಸಿದಾಗ ನಿರ್ಲಕ್ಷ ಮಾಡಿದವರೂ ಇದ್ದಾರೆ, ಆದರೆ ಮದುವೆ ಆಮಂತ್ರಣ ಕಛೇರಿಯಲ್ಲಿ ನೀಡಿ, ಸ್ವತಃ ಕೈಯಲ್ಲಿ ಕೊಡದಿದ್ದರೂ ಬರಿಯ ಫೋನ್ ಕಾಲ್.ಗೆ ಬೆಲೆ ಕೊಟ್ಟು ನನ್ನ ಮದುವೆಗೆ ಬಂದು ನಮ್ಮನ್ನು ಆಶೀರ್ವದಿಸಿದ್ದಾರೆಂದರೆ ಅವರಂತಹ ಶ್ರೇಷ್ಠ ವ್ಯಕ್ತಿತ್ವ, ಉತ್ತಮ ಗುಣ ಬೇರೆ ಯಾವ ಗಣ್ಯ ವ್ಯಕ್ತಿಯಲ್ಲೂ ಕಾಣಲೂ ಸಾಧ್ಯವಿಲ್ಲ.

ಚಿತ್ತರಂಜನ್ ನಕ್ರೆ ಉದ್ಯೋಗಿ ಕಾರ್ಕಳ


————————————————–

ಅವರಿನ್ನೂ ಇರಬೇಕಿತ್ತು:

ಭಂಡಾರಿಯವರಿಂದ ನಾನೊಮ್ಮೆ ಸನ್ಮಾನ ಸ್ವೀಕರಿಸಿದ್ದಕ್ಕೆ ನನ್ನ ಪಾಲಿನ ಖುಷಿ.ಆವತ್ತು ಅವರು ನನ್ನನ್ನು ಮನತುಂಬಿ ಹಾರೈಸಿದ್ದರು.ಮುಂದೆ ಎಲ್ಲಾದರೂ ಸಿಕ್ಕಾಗ ನನ್ನನ್ನು ಸನ್ಮಾನ ಮಾಡಿದ ನೆನಪು ಮಾಡಿಕೊಳ್ಳುತ್ತಿದ್ದರು.ಅವರು ನಿಧನರಾಗಿದ್ದು ತುಂಬಾ ಬೇಸರ ಮೂಡಿಸಿದೆ.ಅವರಿನ್ನೂ ಇರಬೇಕಿತ್ತು

 

-ಸುಷ್ಮಾ

ವಿದ್ಯಾರ್ಥಿನಿ, ಎಸ್.ವಿ.ಟಿ. ಮಹಿಳಾ ಕಾಲೇಜು ಕಾರ್ಕ