ಮಹಿಳಾ ವಿಜ್ಞಾನಿ ಜಗತ್ತಿಗೆ ‘ಹಸಿರು ಮನೆ ಪರಿಣಾಮ’ ತಿಳಿಸಿದ ಯುನಿಸ್ ನ್ಯೂಟನ್ ಫೂಟ್ ಗೆ ಗೂಗಲ್ ಡೂಡಲ್ ಗೌರವ

ಯಾರಿವರು? ಇಂದಿನ ಡೂಡಲ್​ ವಿಶೇಷತೆಯೇನು?. ಇಂದು ದೈತ್ಯ ಮಾಹಿತಿ ಕಣಜದಾರ ಗೂಗಲ್ ಪುಟ ಓಪನ್​ ಮಾಡಿದಾಕ್ಷಣ ಅಲ್ಲಿರುವ ಸ್ಪೆಷಲ್‌ ಡೂಡಲ್​ನಲ್ಲಿ ಅಧ್ಯಯನ ನಿರತರಾಗಿರುವ ಮಹಿಳೆಯೊಬ್ಬಳು ಕಾಣಸಿಗುತ್ತಾರೆ.ಇಂದು ಗೂಗಲ್ ಪುಟ ತೆರೆದರೆ ಮಹಿಳಾ ವಿಜ್ಞಾನಿ ಯುನಿಸ್ ನ್ಯೂಟನ್ ಫೂಟ್ ಅವರ ಸಾಧನೆ ತಿಳಿಯುತ್ತದೆ. ವಿಜ್ಞಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಇವರು ಮಹಿಳಾ ಹಕ್ಕುಗಳ ಕಾರ್ಯಕರ್ತೆಯೂ ಹೌದು.ಇಡೀ ಪ್ರಪಂಚಕ್ಕೆ ಹಸಿರುಮನೆ ಪರಿಣಾಮವನ್ನು ಪರಿಚಯಿಸಿದ ಅಮೆರಿಕದ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್ ನ್ಯೂಟನ್ ಫೂಟ್ ಅವರಿಗಿಂದು 204ನೇ ಹುಟ್ಟುಹಬ್ಬ. ಯುನಿಸ್ ಅವರು ಭೂಮಿಯ ತಾಪಮಾನ ಏರಿಕೆಗೆ ಕಾರಣವಾದ ಅನಿಲವನ್ನು ಕಂಡುಹಿಡಿದ ಮೊದಲ ವ್ಯಕ್ತಿಯಾಗಿದ್ದಾರೆ.

ಫೂಟ್ ಜೀವನಚರಿತ್ರೆ: ಜುಲೈ 17, 1819ರಲ್ಲಿ ಅಮೆರಿಕದ ಕನೆಕ್ಟಿಕಟ್‌ನಲ್ಲಿ ಜನಿಸಿದ ಇವರು ಟ್ರಾಯ್ ಫೀಮೇಲ್ ಸೆಮಿನರಿಯಲ್ಲಿ ವ್ಯಾಸಂಗ ಮಾಡಿದರು. ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಆಸಕ್ತಿಯಿದ್ದ ಇವರಿಗೆ ರಸಾಯನಶಾಸ್ತ್ರ ಪ್ರಯೋಗಾಲಯಗಳಲ್ಲಿ ಭಾಗವಹಿಸಲು ಈ ವಿದ್ಯಾಸಂಸ್ಥೆ ಪ್ರೋತ್ಸಾಹಿಸಿತು. ಆದರೆ ಇದು ಮಹಿಳೆಯರನ್ನು ವೈಜ್ಞಾನಿಕ ಕ್ಷೇತ್ರದಿಂದ ವ್ಯಾಪಕವಾಗಿ ದೂರವಿಡುತ್ತಿದ್ದ ಕಾಲಘಟ್ಟವಾಗಿತ್ತು. ಆದರೆ, ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಫೂಟ್, ಛಲ ಬಿಡದೆ ತನ್ನದೇ ಆದ ಪ್ರಯೋಗಗಳನ್ನು ನಡೆಸುತ್ತಿದ್ದರು. 1856ರಲ್ಲಿ ಇವರು ನಡೆಸಿದ ಪ್ರಯೋಗವೊಂದು ಜಗತ್ತಿಗೆ ಹವಾಮಾನ ಬದಲಾವಣೆಯ ಕುರಿತು ತಿಳುವಳಿಕೆ ನೀಡಿತು.

ವಾತಾವರಣದ ಮೇಲೆ ಕಾರ್ಬನ್ ಡೈ ಆಕ್ಸೈಡ್ ಪರಿಣಾಮ: ಫೂಟ್​ ಅವರು ಮೊದಲ ಬಾರಿಗೆ ಒಂದು ವಿಶೇಷ ಪ್ರಯೋಗವನ್ನು ಭೂಮಿಯ ತಾಪಾಮಾನದ ಕುರಿತು ನಡೆಸುತ್ತಾರೆ. ಇದಕ್ಕಾಗಿ ಸಿಲಿಂಡರ್‌ಗಳಲ್ಲಿ ವಿವಿಧ ಅನಿಲಗಳನ್ನು ಇರಿಸುತ್ತಾರೆ. ಅವೆಲ್ಲವನ್ನೂ ವೀಕ್ಷಣೆಗಾಗಿ ಸೂರ್ಯನ ಬೆಳಕಿಗೆ ಒಡ್ಡಲಾಗುತ್ತದೆ. ಸೂರ್ಯನ ಬೆಳಕಿನ ಪರಿಣಾಮ ಕಾರ್ಬನ್ ಡೈಆಕ್ಸೈಡ್ ಇತರ ಅನಿಲಗಳಿಗಿಂತ ಹೆಚ್ಚು ಬಿಸಿಯಾಗಿರುವುದನ್ನು ಫೂಟ್ ಗಮನಿಸುತ್ತಾರೆ. ಕಾರ್ಬನ್ ಡೈ ಆಕ್ಸೈಡ್ ಭೂಮಿಯ ಮೇಲೆ ಹೆಚ್ಚು ಬಿಸಿ ಪರಿಣಾಮವನ್ನು ಬೀರುವುದರಿಂದ, ಭೂಮಿಯ ತಾಪಮಾನವನ್ನು ಬದಲಾಯಿಸುವ ಸಾಮರ್ಥ್ಯವನ್ನು ಕಾರ್ಬನ್ ಡೈ ಆಕ್ಸೈಡ್ ಹೊಂದಿದೆ ಎಂದು ತೀರ್ಮಾನಿಸಿದರು. ಆದ್ದರಿಂದ, ಕಾರ್ಬನ್ ಡೈ ಆಕ್ಸೈಡ್ ಮಟ್ಟಗಳು ಮತ್ತು ವಾತಾವರಣದ ಉಷ್ಣತೆಯ ನಡುವಿನ ಸಂಪರ್ಕವನ್ನು ಕಂಡುಹಿಡಿದ ಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಫೂಟ್ ಪಾತ್ರರಾದರು.

ಯುನಿಸ್ ನ್ಯೂಟನ್ ಫೂಟ್ ಅವರುಕೆಲವು ವರದಿ ಪ್ರಕಾರ1888ರ ಸೆಪ್ಟೆಂಬರ್ 29 ಅಥವಾ 30ರಂದು ಮ್ಯಾಸಚೂಸೆಟ್ಸ್‌ನ ಲೆನಾಕ್ಸ್‌ನಲ್ಲಿ ನಿಧನರಾದರು. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಗ್ರೀನ್-ವುಡ್ ಸ್ಮಶಾನದಲ್ಲಿ ಅವರ ಮೃತದೇಹವನ್ನು ಸಮಾಧಿ ಮಾಡಲಾಗಿದೆ.
ಮಹಿಳಾ ಹಕ್ಕುಗಳ ಕಾರ್ಯಕರ್ತೆ ನ್ಯೂಟನ್ ಫೂಟ್: ಈಕೆ ಕೇವಲ ವಿಜ್ಞಾನಿಯಲ್ಲ. ಸಮಾಜದಲ್ಲಿ ಮಹಿಳೆಯರಿಗೂ ಅವರ ಹಕ್ಕಿಗಾಗಿ ಹೋರಾಡಿದವರು. ಹೌದು ಫೂಟ್ ತನ್ನ ಜೀವನದುದ್ದಕ್ಕೂ ಮಹಿಳಾ ಹಕ್ಕುಗಳ ಪ್ರಚಾರಕ್ಕಾಗಿ ಸಮಯವನ್ನು ಕಳೆದರು. 1848 ರಲ್ಲಿ, ಫುಟ್ ಸೆನೆಕಾ ಫಾಲ್ಸ್‌ನಲ್ಲಿ ನಡೆದ ಮೊದಲ ಮಹಿಳಾ ಹಕ್ಕುಗಳ ಸಮಾವೇಶದಲ್ಲಿ ಸಂಪಾದಕೀಯ ಸಮಿತಿಯ ಸದಸ್ಯರಾಗಿ ಭಾಗವಹಿಸಿದರು. ಮಹಿಳೆಯರ ಭಾವನೆಗಳ ಘೋಷಣೆಯ ಹಕ್ಕುಗಳಿಗಾಗಿ ತಮ್ಮ 5 ನೇ ಸಹಿ ಹಾಕಿದರು. ಈ ಸಹಿ ಸಾಮಾಜಿಕ ಮತ್ತು ಕಾನೂನು ಸ್ಥಾನಮಾನದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ನೀಡುವ ದಾಖಲೆಯಾಗಿತ್ತು.