ಬ್ಯಾಡ್ಮಿಂಟನ್​ನಲ್ಲಿ ಶುಭಾರಂಭ: ಏಷ್ಯನ್​ ಗೇಮ್ಸ್: ಟೇಬಲ್​ ಟೆನಿಸ್​ನಲ್ಲಿ ಭಾರತಕ್ಕೆ ಚೊಚ್ಚಲ ಪದಕ

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯಾಡ್​ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪದಕ ಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. 13 ಚಿನ್ನ, 21 ಬೆಳ್ಳಿ ಮತ್ತು 22 ಕಂಚಿನ ಪದಕ ಸೇರಿದಂತೆ 56 ಪದಕಗಳನ್ನು ಭಾರತೀಯ ಸ್ಪರ್ಧಿಗಳು ಗೆದ್ದಿದ್ದು, ಪದಕಗಳ ಶತಕ ಬಾರಿಸುವ ಉತ್ಸಾಹದಲ್ಲಿದ್ದಾರೆ.

ಏಷ್ಯನ್​ ಗೇಮ್ಸ್​ನಲ್ಲಿ ಟೇಬಲ್​​ ಟೆನಿಸ್​ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಅಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಉತ್ತರ ಕೊರಿಯಾದ ಸುಯೋಂಗ್ ಚಾ ಮತ್ತು ಸುಗ್ಯಾಂಗ್ ಪಾಕ್ ವಿರುದ್ಧ 4-3 ಅಂತರದಲ್ಲಿ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ಈ ಮೂಲಕ ಟಿಟಿ ಸ್ಪರ್ಧೆಯಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕ ಒಲಿದುಬಂದಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ವಿಶ್ವದ 2ನೇ ಶ್ರೇಯಾಂಕದ ಚೀನಾದ ಮೆಂಗ್ ಚೆನ್ ಮತ್ತು ಯಿಡಿ ವಾಂಗ್ ಅವರನ್ನು ಸೋಲಿಸಿ ಡಬಲ್ಸ್ ಸ್ಪರ್ಧೆಯಲ್ಲಿ ಪದಕ ಖಚಿತಪಡಿಸಿಕೊಂಡಿದ್ದರು. ಈ ಜೋಡಿಯು 3-1 (11-5, 11-5, 5-11, 11-9)ರಿಂದ ಎರಡನೇ ಶ್ರೇಯಾಂಕದ ಚೀನಾದ ಜೋಡಿಯನ್ನು ಸೋಲಿಸಿ ಸೆಮಿಫೈನಲ್ ತಲುಪಿತ್ತು.ಭಾರತ ಮೊದಲ ಗೇಮ್ ಅನ್ನು 11-7 ರಿಂದ ಗೆದ್ದುಕೊಂಡಿತು. ಮೂರನೇ ಮತ್ತು ಆರನೇ ಪಂದ್ಯಗಳಲ್ಲಿ ಕ್ರಮವಾಗಿ 7-11 ಮತ್ತು 5-11ರಿಂದ ತಂಡ ಹಿನ್ನಡೆ ಅನುಭವಿಸಿತು. ಕೊನೆಯ ಗೇಮ್​ನಲ್ಲಿ ಲಯಕ್ಕೆ ಮರಳುವಲ್ಲಿ ಎಡವಿತು. ಹೀಗಾಗಿ ಕಂಚಿಗೆ ತೃಪ್ತಿ ಪಡಬೇಕಾಯಿತು.

ಬ್ಯಾಡ್ಮಿಂಟನ್​ನಲ್ಲಿ ಶುಭಾರಂಭ: ಬ್ಯಾಡ್ಮಿಂಟನ್​ ಗುಂಪು ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಗೆದ್ದುಕೊಂಡಿತ್ತು. ಸೋಮವಾರ ವೈಯಕ್ತಿಕ ಪ್ರದರ್ಶನದಲ್ಲಿ ಷಟ್ಲರ್​ಗಳು ಉತ್ತಮ ಆರಂಭ ಪಡೆದುಕೊಂಡಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ 29 ನಿಮಿಷದ ಆಟದಲ್ಲಿ 21-10, 21-19 ರಲ್ಲಿ ವಿಯೆಟ್ನಾಂನ ಐ ಡಕ್ ಫಾಟ್ ವಿರುದ್ಧ ಪುರುಷರ ಸಿಂಗಲ್ಸ್ 64ನೇ ಸುತ್ತಿನ ಪಂದ್ಯದಲ್ಲಿ ಜಯಗಳಿಸಿದರು. 30ರ ಹರೆಯದ ಭಾರತೀಯ ಶಟ್ಲರ್ 32ರ ಸುತ್ತಿನಲ್ಲಿ ವಿಶ್ವದ 119ನೇ ಶ್ರೇಯಾಂಕಿತ ಕೊರಿಯಾದ ಗಣರಾಜ್ಯದ ಯುನ್ ಗ್ಯು ಲೀ ಅವರನ್ನು ಎದುರಿಸಲಿದ್ದಾರೆ.ಕ್ರೀಡಾ ಸಚಿವರಿಂದ​ ಪ್ರಶಂಸೆ: ಕಂಚಿನ ಪದಕ ಗೆದ್ದ ಟಿಟಿ ಆಟಗಾರ್ತಿಯರಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್​ ಠಾಕೂರ್​​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಎಕ್ಸ್​ ಆಯಪ್​ ಖಾತೆಯಲ್ಲಿ ಟೇಬಲ್​ ಟೆನಿಸ್​ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದು ಕೊಟ್ಟ ಮುಖರ್ಜಿ ಜೋಡಿಗೆ ಹ್ಯಾಟ್ಸ್ ಆಫ್! ಎಂದು ಬರೆದುಕೊಂಡಿದ್ದಾರೆ.

ಎಚ್‌.ಎಸ್.ಪ್ರಣಯ್ ಮೊದಲ ಸುತ್ತಿನಲ್ಲಿ ಬೈ ಪಡೆದ ನಂತರ 32ರ ಸುತ್ತಿಗೆ ಆಯ್ಕೆಯಾಗಿದ್ದು, ನಾಳೆ (ಮಂಗಳವಾರ) ವಿಶ್ವದ ನಂ. 311 ಬಟ್ಡಾವಾ ಮುಂಕ್ಬಾತ್ ಎದುರಿಸಲಿದ್ದಾರೆ. ಪಿ.ವಿ.ಸಿಂಧು ಕೂಡ ನಾಳೆ 32ರ ಮಹಿಳಾ ಸಿಂಗಲ್ಸ್ ಸುತ್ತಿನಲ್ಲಿ ಚೈನೀಸ್ ತೈಪೆಯ ಹ್ಸು ವೆನ್-ಚಿ ವಿರುದ್ಧ ಆಡಲಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ರೋಹನ್ ಕಪೂರ್ ಮತ್ತು ಸಿಕ್ಕಿ ರೆಡ್ಡಿ ಮತ್ತು ಪುರುಷರ ಡಬಲ್ಸ್ ಜೋಡಿ ಅರ್ಜುನ್ ಎಂ.ಆರ್. ಮತ್ತು ಧ್ರುವ ಕಪಿಲಾ ಮೊದಲ ಸುತ್ತಿನಲ್ಲೇ ಏಷ್ಯನ್ ಗೇಮ್ಸ್​ನಿಂದ ಹೊರಬಿದ್ದಿದ್ದಾರೆ.ವಿಶ್ವದ ನಂ.3 ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು 32 ರ ಸುತ್ತಿನಲ್ಲಿ ಹಾಂಕಾಂಗ್ ಚೀನಾದ ಚೌ ಹಿನ್ ಲಾಂಗ್ ಮತ್ತು ಲುಯಿ ಚುನ್ ವೈ ಅವರನ್ನು 21-11, 21-16 ಅಂತರದಲ್ಲಿ ಸೋಲಿಸಿದರು. ಈ ಜೋಡಿ ಇಂಡೋನೇಷ್ಯಾದ ಲಿಯೊ ರೋಲಿ ಕಾರ್ನಾಂಡೋ ಮತ್ತು ಮಾರ್ಟಿನ್ ಡೇನಿಯಲ್ ವಿರುದ್ಧ ಬುಧವಾರ ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಲಿದೆ.