ವಾಹನ ಮಾಲೀಕರಿಗೆ ಗುಡ್ ನ್ಯೂಸ್; ಎಲ್ಲ ರಾಜ್ಯಗಳಿಗೂ ಹೊಂದುವಂತೆ ಒಂದೇ ವಾಹನ ನೋಂದಣಿ ಸಂಖ್ಯೆ

ನವದೆಹಲಿ: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳುವ ವಾಹನ ಮಾಲೀಕರಿಗೆ ಗುಡ್ ನ್ಯೂಸ್. ಇನ್ಮುಂದೆ ನೀವು ತಮ್ಮ ವಾಹನವನ್ನು ಮರು ನೋಂದಣಿ ಮಾಡುವ ಅಗತ್ಯವಿಲ್ಲ.

ಹೌದು, ಹೊಸ ವಾಹನಗಳಿಗೆ ‘ಭಾರತ್‌ ಸರಣಿ’ (ಬಿಎಚ್‌–ಸಿರೀಸ್‌) ಎನ್ನುವ ಹೊಸ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಿಂದಾಗಿ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಅಲ್ಲಿ ಮರು ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ.

ಮೊದಲಿಗೆ ರಕ್ಷಣಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು ಹಾಗೂ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಸ್ವಯಂ ಪ್ರೇರಿತವಾಗಿ ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ತಿಳಿಸಿದೆ.

ಕೇಂದ್ರ ಮೋಟಾರು ವಾಹನಗಳ (12ನೇ ತಿದ್ದುಪಡಿ) ನಿಯಮವು ಸೆಪ್ಟೆಂಬರ್‌ 15ರಿಂದ ಜಾರಿಗೆ ಬರಲಿದೆ. ಬಿಎಚ್‌–ಸರಣಿಯ ವಾಹನಗಳಿಗೆ ನೋಂದಣಿಯನ್ನು ಜಾಲತಾಣದ ಮೂಲಕ ಮಾಡಲಾಗುತ್ತದೆ ಎಂದು ಹೇಳಿದೆ.

ಸದ್ಯ ಇರುವ ನಿಯಮದ ಪ್ರಕಾರ, ಯಾವುದೇ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಸ್ಥಳಾಂತರಗೊಂಡ ರಾಜ್ಯದಲ್ಲಿ 12 ತಿಂಗಳ ಒಳಗಾಗಿ ಮರು ನೋಂದಣಿ ಮಾಡಿಕೊಳ್ಳಬೇಕು.