ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಮೊದಲ ಹಂತದಲ್ಲಿ ಅಕ್ಟೋಬರ್ ಮಧ್ಯಭಾಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಹೊಸ ಮೆಟ್ರೋ ರೈಲುಗಳ ಕಾರ್ಯಾಚರಣೆಗೆ ರೈಲ್ವೆ ಮಂಡಳಿಯಿಂದ ತಾತ್ಕಾಲಿಕ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಅಂತಿಮ ಸುರಕ್ಷತಾ ತಪಾಸಣೆ ಪೂರ್ಣಗೊಂಡ ಬಳಿಕ ಸಂಚಾರ ಆರಂಭಿಸಲು ಸಿದ್ಧತೆ ನಡೆಯುತ್ತಿದೆ.
ಮೊದಲ ಹಂತದಲ್ಲಿ 7.5 ಕಿ.ಮೀ. ಮಾರ್ಗ
ಪಿಂಕ್ ಲೈನ್‌ನ ಮೊದಲ ಹಂತದಲ್ಲಿ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆ (ಸ್ವಾಗತ್ ಕ್ರಾಸ್)ವರೆಗೆ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.
ಈ ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳು ಇರಲಿವೆ:
- ಕಾಳೇನ ಅಗ್ರಹಾರ
- ಹುಳಿಮಾವು
- ಐಐಎಂಬಿ
- ಜೆ.ಪಿ. ನಗರ 4ನೇ ಹಂತ
- ಜಯದೇವ ಆಸ್ಪತ್ರೆ
- ತಾವರೆಕೆರೆ
ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ ಇಂಟರ್‌ಚೇಂಜ್ ಸೌಲಭ್ಯ ದೊರೆಯಲಿದೆ.
ನಾಗವಾರದವರೆಗೆ 13.92 ಕಿ.ಮೀ. ಸುರಂಗ ಮಾರ್ಗ
ತಾವರೆಕೆರೆ (ಸ್ವಾಗತ್ ಕ್ರಾಸ್)ಯಿಂದ ನಾಗವಾರದವರೆಗೆ 13.92 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು 12 ಭೂಗತ ನಿಲ್ದಾಣಗಳು ಇರಲಿವೆ.
ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್‌ಫೋರ್ಡ್ ಟೌನ್, ರಾಷ್ಟ್ರೀಯ ಮಿಲಿಟರಿ ಶಾಲೆ, ಎಂ.ಜಿ. ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್ ರೈಲು ನಿಲ್ದಾಣ, ಪಾಟರ್ಸ್ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಹಾಗೂ ನಾಗವಾರ ನಿಲ್ದಾಣಗಳು ಈ ಮಾರ್ಗದಲ್ಲಿವೆ.
ಎಂ.ಜಿ. ರಸ್ತೆ ನಿಲ್ದಾಣದಲ್ಲಿ ನೇರಳೆ ಮಾರ್ಗಕ್ಕೆ ಇಂಟರ್‌ಚೇಂಜ್ ಸೌಲಭ್ಯ ಸಿಗಲಿದ್ದು, ನಾಗವಾರದಲ್ಲಿ ಮುಂದಿನ ಹಂತದ ಬ್ಲೂ ಲೈನ್ ಸಂಪರ್ಕ ಕಲ್ಪಿಸುವ ಯೋಜನೆ ಇದೆ.
6 ರೈಲುಗಳೊಂದಿಗೆ ಆರಂಭ
ಆರಂಭಿಕ ಹಂತದಲ್ಲಿ ಬಿಎಂಆರ್‌ಸಿಎಲ್ ಒಟ್ಟು 6 ರೈಲುಗಳನ್ನು ಕಾರ್ಯಾಚರಣೆಗೆ ಬಳಸಲು ಯೋಜಿಸಿದೆ. ಸಾಮಾನ್ಯ ಅವಧಿಯಲ್ಲಿ 10 ನಿಮಿಷಕ್ಕೊಮ್ಮೆ ಹಾಗೂ ಪೀಕ್ ಅವರ್‌ನಲ್ಲಿ ಸುಮಾರು 6 ನಿಮಿಷಕ್ಕೊಮ್ಮೆ ರೈಲು ಸಂಚರಿಸುವ ನಿರೀಕ್ಷೆಯಿದೆ.
ಅಕ್ಟೋಬರ್‌ನಲ್ಲಿ ವಾಣಿಜ್ಯ ಸಂಚಾರ?
ಪಿಂಕ್ ಲೈನ್‌ನ ಮೊದಲ ಹಂತದ ಸಿಗ್ನಲಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಇಂಡಿಪೆಂಡೆಂಟ್ ಸೇಫ್ಟಿ ಅಸೆಸರ್ (ISA) ಪ್ರಮಾಣಪತ್ರ ದೊರೆತಿದೆ. ಇದೀಗ ಬಿಇಎಂಎಲ್ ನಿರ್ಮಿತ ಮೆಟ್ರೋ ಕೋಚ್‌ಗಳ ಕಾರ್ಯಾಚರಣೆಗೆ ರೈಲ್ವೆ ಮಂಡಳಿಯಿಂದ ತಾತ್ಕಾಲಿಕ ಅನುಮೋದನೆಯೂ ಸಿಕ್ಕಿದೆ.
ಯೋಜನೆಯಂತೆ ಅಕ್ಟೋಬರ್ ಮೊದಲ ವಾರದಲ್ಲಿ ಎರಡು ದಿನಗಳ ಕಾಲ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಅಂತಿಮ ತಪಾಸಣೆ ನಡೆಸುವ ನಿರೀಕ್ಷೆಯಿದೆ. ತಪಾಸಣೆ ಹಾಗೂ ಅಗತ್ಯ ಅನುಮತಿಗಳು ಪೂರ್ಣಗೊಂಡರೆ ಅಕ್ಟೋಬರ್ ಎರಡನೇ ವಾರ ಅಥವಾ ಮಧ್ಯಭಾಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.
ಇನ್ನು ತಾವರೆಕೆರೆಯಿಂದ ನಾಗವಾರದವರೆಗೆ ಇರುವ ಸಂಪೂರ್ಣ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ 2027ರ ಆರಂಭದಲ್ಲಿ ನಡೆಯುವ ನಿರೀಕ್ಷೆಯಿದೆ. ಸುರಕ್ಷತಾ ತಪಾಸಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ 2027ರ ಜೂನ್ ಅಥವಾ ಜುಲೈ ವೇಳೆಗೆ ಈ ಸುರಂಗ ಮಾರ್ಗವೂ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ.
ಪಿಂಕ್ ಲೈನ್ ಸಂಪೂರ್ಣವಾಗಿ ಕಾರ್ಯಾರಂಭಿಸಿದ ಬಳಿಕ ಬನ್ನೇರುಘಟ್ಟ ರಸ್ತೆಯಿಂದ ಎಂ.ಜಿ. ರಸ್ತೆ ಹಾಗೂ ನಾಗವಾರಕ್ಕೆ ವೇಗವಾಗಿ ಸಂಪರ್ಕ ಕಲ್ಪಿಸುವ ಮೂಲಕ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಅನುಕೂಲವಾಗಲಿದೆ.















