ಉಡುಪಿ ಜಿಲ್ಲೆಯಾದ್ಯಂತ ಶುಭ ಶುಕ್ರವಾರ ಆಚರಣೆ

ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು(ಗುಡ್ ಫ್ರೈಡೆ) ಉಡುಪಿ ಜಿಲ್ಲೆಯಾದ್ಯಂತ ಉಪವಾಸ ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.

ಜಿಲ್ಲೆಯ ಎಲ್ಲಾ ಚರ್ಚುಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ಜರುಗಿತು. ಧರ್ಮ ಪ್ರಾಂತ್ಯದ ಪ್ರಧಾನ ದೇವಾಲಯವಾದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಢ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರುಗಳಾದ ಕೆನ್ಯೂಟ್, ಕಲ್ಯಾಣಪುರ ಪಿಲಾರ್ ಸಭೆಯ ಬ್ರಾಯನ್ ಸಿಕ್ವೇರಾ ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಕೆಲವು ಚರ್ಚುಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣವನ್ನಪ್ಪುವ ತನಕದ ಘಟನೆಗಳನ್ನು ಪ್ರಸ್ತುತಪಡಿಸಲಾಯಿತು. ಯೇಸುವಿಗೆ ಮರಣ ವಿಧಿಸುವುದು, ಯೇಸುವಿನ ಹೆಗಲಿಗೆ ಶಿಲುಬೆ ನೀಡುವುದು, ಯೇಸು ಮೊದಲ ಬಾರಿ ಶಿಲುಬೆಯಡಿ ಬೀಳುವುದು, ಯೇಸು ತನ್ನ ದುಃಖತಪ್ತ ಮಾತೆಯನ್ನು ನೋಡುವುದು, ಸಿರೆನಾದ ಸೈಮಾನ್‌ ಯೇಸುವಿಗೆ ಶಿಲುಬೆ ಹೊರಲು ಸಹಾಯ ಮಾಡುವುದು, ವೆರೊನಿಕಾ ಯೇಸುವಿನ ಮುಖಾರವಿಂದವನ್ನು ಒರೆಸುವುದು.

ಯೇಸು ಎರಡನೇ ಬಾರಿ ಶಿಲುಬೆಯಡಿ ಬೀಳುವುದು, ಯೇಸು ಜೆರುಸಲೇಂನ ಮಹಿಳೆಯರಿಗೆ ಸಾಂತ್ವನ ಹೇಳುವುದು, ಯೇಸು ಮೂರನೇ ಬಾರಿ ಶಿಲುಬೆಯಡಿ ಬೀಳುವುದು, ಯೇಸುವಿನ ದೇಹದ ವಸ್ತ್ರ ತೆಗೆದು ನಗ್ನ ಮಾಡುವುದು, ಯೇಸುವನ್ನು ಶಿಲುಬೆಗೇರಿಸುವುದು, ಯೇಸು ಶಿಲುಬೆಯಲ್ಲಿ ಪ್ರಾಣ ಬಿಡುವುದು, ಯೇಸುವಿನ ಪಾರ್ಥಿವ ಶರೀರ ಶಿಲುಬೆಯಿಂದ ಕೆಳಗಿಳಿಸುವುದು, ಯೇಸುವಿನ ಪಾರ್ಥಿವ ಶರೀರದ ಸಂಸ್ಕಾರ ಹೀಗೆ 14 ಹಂತಗಳಲ್ಲಿ ಶಿಲುಬೆ ಹಾದಿ ನಡೆಯಿತು.

ಜಿಲ್ಲೆಯಾದ್ಯಂತ ಶುಕ್ರವಾರ ಕ್ರೈಸ್ತರು ಉಪವಾಸ, ಧ್ಯಾನ- ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಮರಣದ ಹಿನ್ನೆಲೆಯಲ್ಲಿ  ಎಲ್ಲೆಡೆ ಮೌನ ಆವರಿಸಿತ್ತು. ಯೇಸು ಶಿಲುಬೆಯನ್ನು ಹೆಗಲಿಗೆ ಹೇರಿಕೊಂಡು ನಡೆದ ಬಹು ಕಷ್ಟದ ಹಾದಿಯನ್ನು ಸ್ಮರಿಸಿ, ವಿಮರ್ಶಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯಗಳಲ್ಲಿ ಪವಿತ್ರ ಬೈಬಲ್‌ ವಾಚನ, ಪ್ರವಚನ ನಡೆಯಿತು.

ಚರ್ಚಿನಲ್ಲಿ ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆಯನ್ನು ಧರಿಸಿ ಯೇಸು ಕ್ರಿಸ್ತನ ಕೊನೆಯ ಗಳಿಗೆಗಳ ವತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತಂದು ಭಕ್ತರು ನಮನ ಸಲ್ಲಿಸಿ, ತಮ್ಮ 40 ದಿನಗಳ ತ್ಯಾಗದ ಉಳಿಕೆಯ ಹಣವನ್ನು ಬಡ ಬಗ್ಗರಿಗಾಗಿ ನೀಡಿದರು.
ಕೋವಿಡ್ ಎರಡನೇ ಅಲೆಯ ಹಿನ್ನಲೆಯಲ್ಲಿ ಧಾರ್ಮಿಕ ವಿಧಿಯಲ್ಲಿ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ, ಭಾಗವಹಿಸುವ ಪ್ರತಿಯೊಬ್ಬ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಲಾಗಿತ್ತು.