ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲೆ 28% ತೆರಿಗೆ: ವರದಿಯನ್ನು ಮುಂದೂಡಿದ ಜಿ.ಎಸ್.ಟಿ ಕೌನ್ಸಿಲ್

ನವದೆಹಲಿ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕಾರ್ಯವಿಧಾನದ ವಿಸ್ತರಣೆ ಮತ್ತು ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಗರಿಷ್ಠ 28 ಪ್ರತಿಶತ ತೆರಿಗೆ ದರದ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು, ಕುದುರೆ ರೇಸಿಂಗ್ ಕುರಿತು ಸಚಿವರ ಗುಂಪು ವರದಿ(ಜಿಒಎಂ)ಯನ್ನು ಮುಂದೂಡಲಾಗಿದೆ. ಜಿಒಎಂ ಈಗ 15 ದಿನಗಳಲ್ಲಿ ನಿಯಮಗಳ ಕುರಿತು ಸಲಹೆಗಳನ್ನು ಸಲ್ಲಿಸಲಿದೆ.

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಜಿಒಎಂ, ಆನ್‌ಲೈನ್ ಗೇಮಿಂಗ್‌ಗೆ ಆಟಗಾರರು ಆಟದಲ್ಲಿ ಭಾಗವಹಿಸುವಾಗ ಪಾವತಿಸುವ ಸ್ಪರ್ಧೆಯ ಪ್ರವೇಶ ಶುಲ್ಕ ಸೇರಿದಂತೆ ಗೆಲ್ಲಲಾಗುವ ಸಂಪೂರ್ಣ ಮೌಲ್ಯದ ಮೇಲೆ ತೆರಿಗೆ ವಿಧಿಸಬೇಕು ಎಂದು ಶಿಫಾರಸು ಮಾಡಿತ್ತು. ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ಆರಂಭವಾದ ಜಿಎಸ್‌ಟಿ ಕೌನ್ಸಿಲ್‌ನ ಎರಡನೇ ದಿನದ ಸಭೆಯಲ್ಲಿ ಮೇಲಿನ ಎರಡು ವಿಷಯಗಳು ಚರ್ಚೆಗೆ ಬಂದಿವೆ.

ರೇಸ್ ಕೋರ್ಸ್‌ಗಳ ಸಂದರ್ಭದಲ್ಲಿ, ಟೋಟಲೈಝೇಟರ್‌ನಲ್ಲಿ ಇರಿಸಲಾದ ಮತ್ತು ಬುಕ್‌ಮೇಕರ್‌ಗಳೊಂದಿಗೆ ಇರಿಸಲಾದ ಬೆಟ್ ಗಳ ಸಂಪೂರ್ಣ ಮೌಲ್ಯದ ಮೇಲೆ ಜಿ.ಎಸ್.ಟಿ ವಿಧಿಸುವಂತೆ ಜಿಒಎಂ ಸೂಚಿಸಿದೆ. ಕ್ಯಾಸಿನೊಗಳಲ್ಲಿ, ಆಟಗಾರರೊಬ್ಬರು ಕ್ಯಾಸಿನೊದಿಂದ ಖರೀದಿಸಿದ ಚಿಪ್ಸ್/ನಾಣ್ಯಗಳ ಪೂರ್ಣ ಮುಖಬೆಲೆಯ ಮೇಲೆ ತೆರಿಗೆಯನ್ನು ವಿಧಿಸಬೇಕು ಎಂದು ಜಿಒಎಂ ಶಿಫಾರಸು ಮಾಡಿದೆ. ಹಿಂದಿನ ಸುತ್ತುಗಳಲ್ಲಿನ ಗೆಲುವಿನೊಂದಿಗೆ ಇರಿಸಲಾದ ಬೆಟ್ಟಿಂಗ್‌ಗಳನ್ನು ಒಳಗೊಂಡಂತೆ ಪ್ರತಿ ಸುತ್ತಿನ ಬೆಟ್ಟಿಂಗ್‌ನಲ್ಲಿ ಇರಿಸಲಾದ ಬಾಜಿಗಳ ಮೌಲ್ಯದ ಮೇಲೆ ಯಾವುದೇ ಜಿ.ಎಸ್.ಟಿ ಅನ್ವಯಿಸುವುದಿಲ್ಲ ಎನ್ನಲಾಗಿದೆ.

ಮೊದಲ ದಿನ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ 47ನೇ ಜಿಎಸ್‌ಟಿ ಕೌನ್ಸಿಲ್, ರಾಜ್ಯ ಸಹವರ್ತಿಗಳನ್ನು ಒಳಗೊಂಡಿದ್ದು, ವಂಚನೆಯನ್ನು ಪರಿಶೀಲಿಸಲು ಪೂರ್ವ-ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳನ್ನು ತೆರಿಗೆ ಜಾಲದ ಅಡಿಯಲ್ಲಿ ತರುವುದು ಸೇರಿದಂತೆ ಕೆಲವು ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು ಬದಲಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.