ಉಡುಪಿ ಜನರ ಬಾಯಿಗೆ ಸೈಲೆಂಟಾಗಿ ರುಚಿ ಹತ್ತಿಸ್ತಿದೆ ಶೀನ ನಾಯ್ಕರು ತಯಾರಿಸೋ ಸ್ಪೆಷಲ್ ಗೋಲಿಸೋಡಾ!: ಒಮ್ಮೆ ಕುಡಿದು ನೋಡ, ಈ ಗೋಲಿ ಸೋಡ

ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಸೂರ್ಯನ ತಾಪ ಮಾತ್ರ ಏರುತ್ತಿದ್ದು ಸೆಖೆಯೂ ಶುರುವಾಗಿದೆ. ಇದೀಗ ಬಿಸಿಲಿನ ತಾಪ ತಡೆಯಲಾಗದೇ ಜನರು ತಂಪುಪಾನೀಯದತ್ತ ಮುಖ ಮಾಡುತ್ತಿದ್ದಾರೆ. ಪೆಪ್ಸಿ ಕೋಲಾಗಳ  ಭರಾಟೆಯ ನಡುವೆಯೂ ಪಕ್ಕ ದೇಸೀ ತಂಪು ಗೋಲಿ‌ಸೋಡ ಸೈಲೆಂಟ್ ಸುದ್ದಿ ಮಾಡುತ್ತಿದೆ.ಹೀಗೆ ಗೋಲಿಸೋಡ ಮಾರುತ್ತಲೇ ಉಡುಪಿಯಲ್ಲಿ ಜನಜನಿತರಾದವರು ದೊಡ್ಡಣಗುಡ್ಡೆಯ ಶೀನ ನಾಯ್ಕರು.

ಉಡುಪಿಯ ದೊಡ್ಡಣಗುಡ್ಡೆಯ ಶೀನ ನಾಯ್ಕರ  ಸಾಹಸಮಯ ಯಶೋಗಾಥೆಯನ್ನು ಕೇಳಿದರೆ ನಿಜಕ್ಕೂ ನೀವು ಹೆಮ್ಮೆ ಪಡುತ್ತೀರಾ.
ಅವರ ವಯಸ್ಸು ಸರಿ ಸುಮಾರು ಎಪ್ಪತೈದು ವರ್ಷ. ಹಳೆಯ ಸೈಕಲ್‌ ನ ಕ್ಯಾರಿಯರ್ ಮೇಲೆ ಹಳೆಯ ಕಾಲದ ಗೋಲಿ‌ಸೋಡದ ಮರದ ಕ್ಯಾಬಿನ್ ಇಟ್ಟು ತುಂಬಿದ ಬಾಟಲಿಗಳನ್ನು ಅಂಗಡಿಗಳಿಗೆ ನೀಡುತ್ತಾ ಸೈಕಲ್ ತುಳಿಯುತ್ತಾ ಪ್ರತೀ ದಿನವೂ ಸಾಗುತ್ತಾರೆ ನಾಯ್ಕರು.

ಗೋಳಿ ಸೋಡಾ ಅನ್ನೋ ಗೆಳೆಯ:

ಶೀನ ನಾಯ್ಕರ ಹೆಸರು ಉಡುಪಿಯಲ್ಲಿ ಎಲ್ಲರಿಗೂ ಪರಿಚಿತ. ಐವತ್ತೈದು ವರ್ಷಗಳ ಸುಧೀರ್ಘ ಗೋಲಿಸೋಡದ ಜೊತೆಗಿನ ನಂಟು ಇವರದ್ದು.

ಮೊದಲು ಉಡುಪಿ ಗುಂಡಿಬೈಲಿನ ಕಾಳಪ್ಪ ಶೆಟ್ಟಿ ಅವರ ಬಳಿ ಕೆಲಸಕ್ಕಾಗಿ ಸೇರಿದ ಶೀನ ನಾಯ್ಕರು, ಅಂಗಡಿಗಳಿಗೆ ಗೋಲಿ‌ಸೋಡ ವಿತರಕರಾಗಿ ತೊಡಗಿಸಿಕೊಂಡರು. ಆದರೆ ಹೊಸಯುಗದ ಭರಾಟೆಯಲ್ಲಿ ಸಾಪ್ಟ್ ಡ್ರಿಂಕ್ಸ್ ಗಳು ಮಾರುಕಟ್ಟೆ ಲಗ್ಗೆ ಇಟ್ಟವು. ಕಾಲಕಳೆದಂತೆ ಕಾಳಪ್ಪಶೆಟ್ಟಿ ಅವರಿಗೆ ವ್ಯಾಪಾರದಲ್ಲಿ ನಷ್ಟವಾಗುತ್ತ ಸಾಗಿತು. ಆದರೆ ಕಾಳಪ್ಪ ಶೆಟ್ಟಿಯವರ ಮೆಶಿನ್,  ಬಾಟಲ್ ಗಳನ್ನು ತಾನು ಪಡೆದುಕೊಂಡು ಗ್ರಾಹಕರನ್ನು ಕಳೆದುಕೊಳ್ಳದಂತೆ ತಾನೆ ನೋಡಿಕೊಂಡರು ಶೀನ ನಾಯ್ಕರು.

ಶೀನಪ್ಪ ನಾಯ್ಕ ಆತ್ಮವಿಶ್ವಾಸ ಕಳೆದುಕೊಂಡ ವ್ಯಕ್ತಿಯಲ್ಲ. ಅವರು ಹಳೆಯ ಪಾನೀಯಗಳನ್ನೆ ಮುಂದುವರೆಸಿದ್ದಾರೆ. ಅವರೇ ಖುದ್ದಾಗಿ ಲಿಂಬೆ ಶರಬತ್,  ಶುಂಠಿ ಸೋಡ,  ಚಪ್ಪೆ ಸೋಡ,  ಆರೆಂಜ್ ಸೋಡ ತಯಾರಿಸುತ್ತಾರೆ.  ಇದೇ ಕಾಯಕವನ್ನು ಮುಂದುವರೆಸುತ್ತಾ ತನ್ನ ಐದು ಮಕ್ಕಳಿಗೆ ಉತ್ತಮ ಶಿಕ್ಷಣ ‌ನೀಡಿ ಉತ್ತಮ ಉದ್ಯೋಗವನ್ನು ನೀಡಿದ್ದಾರೆ ನಾಯ್ಕರು.

ಬನ್ನಂಜೆ,  ಕೆನರಾ ಬ್ಯಾಂಕ್ ಸಮೀಪದ, ಎಂಜಿಎಂ ಕಾಲೇಜು ,ರಥಬೀದಿಯ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ. ಗೋಲಿಸೋಡವನ್ನು ಅರಸಿಕೊಂಡು ಜನ ಬರುತ್ತಾರೆ, ಹದಿನೈದು ಅಂಗಡಿಗಳಿಗೆ ನಿತ್ಯ ಗೋಲಿಸೋಡವನ್ನು ಸರಬರಾಜು ಮಾಡುವ ಶಿನನಾಯ್ಕ್, ಅದರಲ್ಲಿ ತೃಪ್ತಿ ಕಾಣುತ್ತಾರೆ.  ಮಳೆಗಾಲದಲ್ಲಿ ನಾಲ್ಕು ತಿಂಗಳ ಕಾಲ ಯಾವುದೇ ಬೇಡಿಕೆಯಿಲ್ಲ. ಉಳಿದ ತಿಂಗಳುಗಳಲ್ಲಿ ಗೋಲಿ‌ಸೋಡದ ವ್ಯಾಪಾರ ಮಾಡುತ್ತಾರೆ.

ನಿತ್ಯ ಇಪ್ಪತ್ತೈದು ಕಿ.ಮೀ ದೂರವನ್ನು ಕ್ರಮಿಸುವ  ಶೀನ ನಾಯ್ಕ್, ಉತ್ಸಾಹಿ ಸ್ವಾಭಿಮಾನಿ ವ್ಯಕ್ತಿ, ಉಡುಪಿಯ ಜನರ ಆತ್ಮವಿಶ್ವಾಸ ಗಳಿಸಿದ ವ್ಯಕ್ತಿ.  ಕಠಿಣ ಪರಿಶ್ರಮದ ಇವರ ವ್ಯಕ್ತಿತ್ವ ಇಂದಿನ ಯುವಜನತೆಗೆ ರೋಲ್ ಮಾಡೆಲ್.  ಇಳಿವಯಸ್ಸಿನಲ್ಲೂ ಅವರ ಉತ್ಸಾಹ ಯುವ ಸಮುದಾಯಕ್ಕೆ ಸವಾಲೆಸೆದಂತಿದೆ.

»ರಾಮ್ ಅಜೆಕಾರು ಕಾರ್ಕಳ