ಚಿನ್ನದ ಅಕ್ರಮ ಸಾಗಾಟ ಪ್ರಕರಣ: ನಟಿ ರನ್ಯಾ ರಾವ್‌ಗೆ ₹89 ಕೋಟಿ ದಂಡ

ಬೆಂಗಳೂರು: ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ₹89 ಕೋಟಿ ದಂಡ ವಿಧಿಸಿದೆ.

ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ ಆರೋಪ ರನ್ಯಾ ರಾವ್ ವಿರುದ್ಧವಿದೆ. ಈ ಪ್ರಕರಣದಲ್ಲಿ ರನ್ಯಾ ರಾವ್ ಸೇರಿದಂತೆ ತರುಣ್, ಸಾಹಿಲ್ ಜೈನ್ ಹಾಗೂ ಭರತ್ ಜೈನ್ ಅವರನ್ನು ಬಂಧಿಸಲಾಗಿತ್ತು.

ದುಬೈನಿಂದ 2024ರ ಮಾರ್ಚ್ 7ರಿಂದ 2025ರ ಫೆಬ್ರವರಿ 18ರವರೆಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರುವುದನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಪತ್ತೆಹಚ್ಚಿತ್ತು. ಈ ಅವಧಿಯಲ್ಲಿ ಒಟ್ಟು 113 ಕೆ.ಜಿ. ಚಿನ್ನ ಸಾಗಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಕಸ್ಟಮ್ಸ್ ಕಾಯ್ದೆ-1962ರ ಅನ್ವಯ ಕಸ್ಟಮ್ಸ್ ಜಂಟಿ ನಿರ್ದೇಶಕ ಡಾ. ಸಂದೀಪ್ ಗುಂಜಾಲ್ ಅವರು ರನ್ಯಾ ರಾವ್ ಅವರಿಗೆ ₹89 ಕೋಟಿ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ಪ್ರಕರಣದ ಇತರ ಆರೋಪಿಗಳಾದ ಸಾಹಿಲ್ ಜೈನ್ ಹಾಗೂ ಭರತ್ ಜೈನ್‌ಗೆ ತಲಾ ₹53 ಕೋಟಿ ಮತ್ತು ತರುಣ್ ಕೊಂಡರಾಜುಗೆ ₹49 ಕೋಟಿ ದಂಡ ವಿಧಿಸಲಾಗಿದೆ.

ಈ ಹಿಂದೆ ಡಿಆರ್‌ಐ ದಂಡ ವಿಧಿಸುವ ಸಂಬಂಧ ಆರೋಪಿಗಳಿಗೆ ಶೋಕಾಸ್ ನೋಟಿಸ್ ನೀಡಿತ್ತು. ಕಸ್ಟಮ್ಸ್ ಕಾಯ್ದೆಯಡಿ ನೋಟಿಸ್ ಕುರಿತು ಜಂಟಿ ನಿರ್ದೇಶಕರ ಬಳಿ ಆರೋಪಿಗಳು ಪರಾಮರ್ಶೆಗೆ ಮನವಿ ಸಲ್ಲಿಸಿದ್ದರು. ಇದೀಗ ಪರಾಮರ್ಶೆ ಬಳಿಕ ಕಸ್ಟಮ್ಸ್ ಇಲಾಖೆ ದಂಡ ವಿಧಿಸಿ ಆದೇಶ ಹೊರಡಿಸಿದೆ.

ನಿಯಮಾನುಸಾರ ದಂಡದ ಮೊತ್ತವನ್ನು ಪಾವತಿಸದಿದ್ದರೆ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.