2,000 ರೂ ನೋಟು ಹಿಂತೆಗೆತ: ಚಿನ್ನ ಖರೀದಿಯತ್ತ ಜನರ ಒಲವು; ಚಿನ್ನದ ಬೆಲೆಯಲ್ಲಿ ಜಿಗಿತ

ಮುಂಬೈ: 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಕೇಂದ್ರೀಯ ಬ್ಯಾಂಕ್‌ನ ಕ್ರಮದ ನಂತರ ಜನರು ಚಿನ್ನ ಖರೀದಿಯತ್ತ ಮನಸ್ಸು ಮಾಡಿರುವುದರಿಂದ ಆಭರಣ ಮಾರಾಟದಲ್ಲಿ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ. ಆದರೆ 2016 ರಲ್ಲಿ 500 ರೂ ಮತ್ತು 1,000 ರೂ ನ ನೋಟುಗಳನ್ನು ರದ್ದುಗೊಳಿಸಿದಾಗ ಇದಕ್ಕೂ ಹೆಚ್ಚಿನ ಆಭರಣ ಖರೀದಿಯಾಗಿತ್ತು ಎಂದು ಆಭರಣ ವ್ಯಾಪಾರಿಗಳು ಹೇಳುತ್ತಾರೆ.

2,000 ರೂ ಮುಖಬೆಲೆಯ ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಶುಕ್ರವಾರದ ಪ್ರಕಟಣೆಯ ಬಳಿಕ ಜನರು ಚಿನ್ನ ಖರೀದಿಯತ್ತ ಮುಖಮಾಡಿದ್ದಾರೆ. ಆದಾಗ್ಯೂ, ಯಾವುದೇ ದೊಡ್ಡ ಜನಜಂಗುಳಿ ಇಲ್ಲ, ಗ್ರಾಹಕರ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಬೇಡಿಕೆಯು 2016 ರಂತಿಲ್ಲ ಏಕೆಂದರೆ ಇದು ನೋಟು ನಿಷೇಧವಲ್ಲ. 2,000 ರೂಗಳು ಕಾನೂನುಬದ್ದ ಟೆಂಡರ್ ಆಗಿವೆ ಆದ್ದರಿಂದ ಜನರು ನಿಧಾನಗತಿಯನ್ನು ಅನುಸರಿಸುತ್ತಿದ್ದಾರೆ ಎಂದು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಲಿಮಿಟೆಡ್‌ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ.

ಗ್ರಾಹಕರು ಆಭರಣಗಳಿಗೆ ಪ್ರೀಮಿಯಂ ಬೆಲೆಯನ್ನು ಪಾವತಿಸುತ್ತಿದ್ದಾರೆ ಎಂಬ ವರದಿಗಳನ್ನು ಅವರು ನಿರಾಕರಿಸಿದರು.

ಪ್ರತ್ಯೇಕ ಘಟನೆಗಳು ನಡೆದಿರಬಹುದು. ಚಿನ್ನದ ಬೆಲೆ ಈಗಾಗಲೇ 60,000 ರೂ ಕ್ಕಿಂತ ಹೆಚ್ಚಿದೆ, ಆದರೆ ನೋಟು ಅಮಾನ್ಯೀಕರಣದ ಸಮಯದಲ್ಲಿ ಅದು 30,000 ರೂ ಆಗಿತ್ತು, ಎಂದು ಅವರು ಹೇಳಿದರು.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಗ್ರಾಹಕರು 50,000 ರೂ ಕ್ಕಿಂತ ಹೆಚ್ಚಿನ ವಹಿವಾಟುಗಳಿಗಾಗಿ ಕೆವೈಸಿ ವಿವರಗಳನ್ನು ಮತ್ತು 2 ಲಕ್ಷ ರೂ ಕ್ಕಿಂತ ಹೆಚ್ಚಿನದಕ್ಕೆ ಪ್ಯಾನ್ ಕಾರ್ಡ್ ಅನ್ನು ಸಲ್ಲಿಸಬೇಕು. 10 ಲಕ್ಷಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಸರ್ಕಾರದ ಹಣಕಾಸು ಗುಪ್ತಚರ ಘಟಕಕ್ಕೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಸೋಮವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 485 ರೂ ಏರಿಕೆ ಕಂಡು 60,760 ರೂ ತಲುಪಿದೆ. ಕಳೆದ ಶುಕ್ರವಾರ ಇದು 60,275 ರೂ ಇತ್ತು.