2002 ಗೋಧ್ರಾ ರೈಲು ಹತ್ಯಾಕಾಂಡ: ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಜೀವಾವಧಿ ಶಿಕ್ಷೆ

ಗೋಧ್ರಾ: 2002 ರ ಭೀಬತ್ಸ ಗೋದ್ರಾ ರೈಲು ಹತ್ಯಾಕಾಂಡದ ಘಟನೆಯ ಸುಮಾರು ಎರಡು ದಶಕಗಳ ಬಳಿಕ, ಗುಜರಾತ್‌ನ ಗೋಧ್ರಾ ನ್ಯಾಯಾಲಯವು ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್‌ಗೆ ಕೊಲೆ ಆರೋಪದ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್‌ಸಿ ಕೊಡೇಕರ್ ಹೇಳಿದ್ದಾರೆ.

ಕಳೆದ ವರ್ಷ ರಫೀಕ್ ಹುಸೇನ್ ಬಂಧನದ ನಂತರ ಪ್ರಕರಣದಲ್ಲಿ ಆತನ ವಿರುದ್ಧದ ವಿಚಾರಣೆ ಪ್ರಾರಂಭವಾಗಿತ್ತು. ರೈಲಿನಲ್ಲಿದ್ದ ಒಟ್ಟು 59 ಕರಸೇವಕರನ್ನು ಸಜೀವ ಸುಟ್ಟು ಗೋಧ್ರೋತ್ತರ ಗಲಭೆಗೆ ಕಾರನಾದ ಆರೋಪಿ ರಫೀಕ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭಟುಕ್‌ನನ್ನು ಕಳೆದ ವರ್ಷ ಫೆಬ್ರವರಿ 14 ರಂದು ಗುಜರಾತ್ ಪೊಲೀಸರು ಬಂಧಿಸಿದ್ದರು. ಫೆಬ್ರವರಿ 27, 2002 ರಂದು ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ನಿಲ್ದಾಣದಲ್ಲಿ ಮುಸ್ಲಿಂ ಸಮುದಾಯದ ಗುಂಪು, ಸಾಬರಮತಿ ಎಕ್ಸ್‌ಪ್ರೆಸ್‌ನ ಕೋಚ್‌ಗೆ ಬೆಂಕಿ ಹಚ್ಚಿದ ಪಿತೂರಿಯ ಪ್ರಮುಖ ಅಪರಾಧಿಗಳಲ್ಲಿ 51 ವರ್ಷದ ಭಟುಕ್ ಕೂಡಾ ಶಾಮೀಲಾಗಿದ್ದ. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಇದುವರೆಗೆ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ 35 ನೇ ಆರೋಪಿ ಬಟುಕ್ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್‌ಸಿ ಕೊಡೇಕರ್ ತಿಳಿಸಿದ್ದಾರೆ.

ಇದಕ್ಕೂ ಮೊದಲು, ವಿಶೇಷ ಎಸ್‌ಐಟಿ ನ್ಯಾಯಾಲಯವು ಮಾರ್ಚ್ 1, 2011 ರಂದು ಪ್ರಕರಣದಲ್ಲಿ 31 ಜನರನ್ನು ದೋಷಿ ಎಂದು ಘೋಷಿಸಿತ್ತು. ಅವರಲ್ಲಿ 11 ಜನರಿಗೆ ಮರಣದಂಡನೆ ಮತ್ತು 20 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.