ಉಡುಪಿ: ಈ ಬಾರಿ ಶೇ. 80ರಷ್ಟು ಗ್ರಾಂ ಪಂಚಾಯತ್ ಗಳನ್ನು ಗೆಲ್ಲುವ ಗುರಿ ಹೊಂದಲಾಗಿದ್ದು, ಆ ನಿಟ್ಟಿನಲ್ಲಿ ಗ್ರಾಪಂ ಚುನಾವಣೆಗೆ ಪೂರ್ವತಯಾರಿ ಆಗಿ ಜಿಲ್ಲೆಗೆ ತಲಾ ಎರಡರಂತೆ ಒಟ್ಟು 62 ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಸ್ವರಾಜ್ಯ ಸಮಾವೇಶಕ್ಕಾಗಿ ರಾಜ್ಯದಲ್ಲಿ ಆರು ತಂಡಗಳನ್ನು ರಚನೆ ಮಾಡಲಾಗಿದೆ. ಒಂದೊಂದು ತಂಡಕ್ಕೆ ಐದು ಜಿಲ್ಲೆಗಳು ಬರುತ್ತವೆ. ಪ್ರತಿ ಜಿಲ್ಲೆಯಲ್ಲಿ ಎರಡು ಸಮಾವೇಶ ಹಮ್ಮಿಕೊಳ್ಳುತ್ತೇವೆ. ನಮ್ಮ ತಂಡದಲ್ಲಿ ನಾನು, ಡಿಸಿಎಂ ಅಶ್ವಥ್ ನಾರಾಯಣ, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ್ ಇದ್ದಾರೆ ಎಂದರು.
ಇಂದಿನ ಆರಂಭಗೊಂಡು ಡಿಸೆಂಬರ್ 3ರ ವರೆಗೆ ಸಮಾವೇಶ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು, ಪಂಚಾಯತ್ ಗೆ ಕೊಟ್ಟಿರುವ ಅನುದಾನ, ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಈ ಬಾರಿಯ ಪಂಚಾಯತ್ ಚುನಾವಣೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಅತೀ ಹೆಚ್ಚು ಪಂಚಾಯತ್ ಗಳಲ್ಲಿ ಗೆಲುವು ದಾಖಲಿಸಬೇಕೆಂಬ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ 5808 ಗ್ರಾಪಂ ಬರುತ್ತವೆ. ಎಲ್ಲ ಗ್ರಾಪಂಗಳಲ್ಲಿ ಗೆಲುವು ದಾಖಲಿಸಬೇಕೆಂಬ ಗುರಿಯನ್ನು ಇಟ್ಟುಕೊಂಡು 62 ಸಮಾವೇಶಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದನಂತರ 14ನೇ ಹಣಕಾಸು ಆಯೋಗದ ಮೂಲಕ ಗ್ರಾಪಂಗಳಿಗೆ ನೇರವಾಗಿ ಅನುದಾನ ಕೊಡುವ ಕಾರ್ಯ ಆಗುತ್ತಿದೆ. ನರೇಗಾ ಅನುದಾನ ಕೂಡ ನೇರವಾಗಿ ಬಿಡುಗಡೆಯಾಗುತ್ತಿದೆ. ಇಂದು ಪಂಚಾಯತ್ ಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ಹರಿದು ಬರುತ್ತಿದೆ. ಆ ಮೂಲಕ ಪಂಚಾಯತ್ ಗಳಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
.