ರಿಷಭ್ ಶೆಟ್ಟಿಯವರನ್ನು ಭೇಟಿಯಾದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್: ಚಿತ್ರ ನಿರ್ಮಾಣಕ್ಕೆ ಸರ್ಕಾರದ ಬೆಂಬಲದ ಬಗ್ಗೆ ಚರ್ಚೆ

ಪಣಜಿ: ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ರಿಷಭ್ ಶೆಟ್ಟಿ ಗೋವಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ.

ರಿಷಭ್ ಅವರನ್ನು ಭೇಟಿಯಾದ ಬಳಿಕ ಸಾವಂತ್ ಟ್ವೀಟ್ ಮಾಡಿ, “ನಟ, ಬರಹಗಾರ, ಚಲನಚಿತ್ರ ನಿರ್ಮಾಪಕ ರಿಷಭ್ ಶೆಟ್ಟಿ ಅವರನ್ನು ಮಹಾಲಕ್ಷ್ಮಿ, ಪಣಜಿಯಲ್ಲಿ ಭೇಟಿ ಮಾಡಿ ಸಂವಾದ ನಡೆಸಿದೆ. ಅವರ ಕಾಂತಾರ ಚಿತ್ರ ಜನಮನ್ನಣೆ ಗಳಿಸಿದೆ. ವಿವಿಧ ವಿಷಯಗಳ ಕುರಿತು ಚರ್ಚಿಸಿದೆ ಮತ್ತು ಗೋವಾದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಗೋವಾ ಸರ್ಕಾರದ ಬೆಂಬಲವನ್ನು ಪುನರುಚ್ಚರಿಸಿದೆ” ಎಂದಿದ್ದಾರೆ.

Image
ಚಿತ್ರ: ಡಾ. ಪ್ರಮೋದ್ ಸಾವಂತ್/ಟ್ವಿಟರ್

ಇಲ್ಲಿನ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾದ ರಿಷಭ್ ಶೆಟ್ಟಿ ಮಾತನಾಡಿ, ಸಿನಿಮಾ ನಿರ್ಮಾಪಕರು ಸಾರ್ವತ್ರಿಕ ಸಂಪರ್ಕ ಹೊಂದಿರುವ ವಿಷಯವನ್ನು ಗುರುತಿಸಿದಲ್ಲಿ ಕೊಂಕಣಿ ಚಿತ್ರಗಳು ಕೂಡಾ ಇದೇ ರೀತಿಯ ಯಶಸ್ಸನ್ನು ಕಾಣಬಹುದು ಎಂದರು.

ಇದು ಭಾಷಾ ವಿಷಯವಲ್ಲ. ಇದು ನೀವು ಯಾವ ರೀತಿಯ ವಿಷಯ ವಸ್ತುವನ್ನು ಮುಂದಿಡುತ್ತೀರಿ ಎನ್ನುವುದಾಗಿದೆ. ನಿಮ್ಮಲ್ಲಿ ಜಾಗತಿಕ ಸಂಪರ್ಕವನ್ನು ಏರ್ಪಡಿಸುವ ವಿಷಯವಸ್ತು ಇದ್ದಲ್ಲಿ ಜನರ ಸಿನಿಮಾವನ್ನು ಏಕೆ ನೋಡದಿರುತ್ತಾರೆ? ಅದು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ. ಮರಾಠಿ ಚಿತ್ರ ಸೈರಾಟ್ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಯಶಸ್ಸನ್ನು ಕಂಡಿದೆ. ಕರ್ನಾಟಕದಲ್ಲಿ ತೋರಿಸಿರುವಂತೆಯೆ ಗೋವಾ ಕೂಡಾ ಜಾನಪದ ಸಂಸ್ಕೃತಿಯಿಂದ ಸಮೃದ್ಧವಾಗಿದೆ ಎಂದರು.

ನಮ್ಮದು ಕೃಷಿ ಸಂಸ್ಕೃತಿಯಾಗಿದ್ದು, ಎಲ್ಲವೂ ಇದಕ್ಕೆ ಹೊಂದಿಕೊಂಡಿದೆ. ನಾನು ಕರ್ನಾಟಕದ ಜಾನಪದ ದೈವದ ಕಥೆ ಬಗ್ಗೆ ಹೇಳುತ್ತಿದ್ದೇನೆ. ಆದರೆ, ಇಂತಹ ಜನಪದ ಅಭ್ಯಾಸಗಳು ದೇಶದ ಎಲ್ಲಾ ಕಡೆಯೂ ಇದೆ. ನಾನು ಮುಖ್ಯಮಂತ್ರಿಯವರನ್ನು ಭೇಟಿಯಾದಾಗ ಗೋವಾದಲ್ಲಿಯೂ ವೀರಭದ್ರನ ಆರಾಧನೆ ಇರುವ ಬಗ್ಗೆ ಅವರಿಂದ ತಿಳಿದುಕೊಂಡೆ ಎಂದು ಅವರು ಹೇಳಿದರು.

ಇಲ್ಲಿ ಪ್ಯಾನ್-ಇಂಡಿಯಾ ವಿಷಯ ಅನ್ನುವಂತಹುದೇನಿಲ್ಲ ಮತ್ತೀಗ ಒಟಿಟಿ ವೇದಿಕೆಗಳು ಎಲ್ಲಾ ಮಿತಿಗಳನ್ನು ಮುರಿದಿವೆ. ಹೆಚ್ಚು ಸ್ಥಳೀಯವಾಗಿರುವುದು ಹೆಚ್ಚು ಸಾರ್ವತ್ರಿಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದಾದ್ಯಂತ ನನಗೆ ದೊರಕಿರುವ ಪ್ರೀತಿ ಮತ್ತು ಆಶೀರ್ವಾದದ ಬಗ್ಗೆ ನಾನು ಗೌರವ ಹೊಂದಿದ್ದೇನೆ. ಆದರೆ ನಾನು ಕರ್ನಾಟಕದಿಂದ ಬಂದಿದ್ದೇನೆ ಮತ್ತು ಅದು ನನ್ನ ಕರ್ಮಭೂಮಿ. ನಾನು ಚಿತ್ರಗಳನ್ನು ಅಲ್ಲಿ ಮಾತ್ರ ಮಾಡಲು ಬಯಸುತ್ತೇನೆ ಎಂದು ಅವರು ತಮ್ಮ ಹುಟ್ಟೂರಿನ ಪ್ರೀತಿಯನ್ನು ಮೆರೆದರು.