ಕರಾವಳಿ ಸಹಿತ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗೋ ಕಳ್ಳತನ, ಗೋ ಹತ್ಯೆ: ಹಲ್ಲಿಲ್ಲದ ಗೋಹತ್ಯಾ ನಿಷೇಧ ಕಾನೂನು ತೆಗೆದು ಬಿಸಾಕಿ; ವಾಸುದೇವ ಭಟ್

ಉಡುಪಿ: ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನೇನೋ ಜಾರಿಗೆ ಬಂತು, ಆದ್ರೆ ಕರಾವಳಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ನಿರಂತರವಾಗಿ ಗೋವುಗಳ ಮೇಲೆ ಆಕ್ರಮಣ, ಅಕ್ರಮ ಸಾಗಾಟ, ಗೋಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲದಿದ್ದರೆ, ಹಲ್ಲಿಲ್ಲದ ಗೋಹತ್ಯಾ ಕಾನೂನಿನಿಂದ ಪ್ರಯೋಜನವಾದರೂ ಏನು?. ಆ ಕಾನೂನನ್ನು ತೆಗೆದು ಬಿಸಾಡುವುದೇ ಲೇಸು ಎಂದು ಹಿಂದೂ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಮಂಗಳೂರು ಜಿಲ್ಲೆಗಳಲ್ಲಂತೂ ಗೋವುಗಳ ಸ್ವಚ್ಛಂದ ಬದುಕಿಗೆ ಬೆಂಕಿ ಬೀಳುತ್ತಿದೆ. ದೇವಸ್ಥಾನಗಳ ಅಂಗಣ, ಮನೆಗಳ ಹಟ್ಟಿಗಳಿಗೆ ಹಾಗೂ ಅಲ್ಲಲ್ಲಿ ಬೀದಿಗಳಲ್ಲಿ ಅನಾಥ ಬದುಕು ಸಾಗಿಸುತ್ತಿರುವ ಗೋವುಗಳ ಮೇಲೆ ದುರುಳರ ಅಟ್ಟಹಾಸ ಮುಂದುವರೆದಿದೆ ಎಂದಾದರೆ ಕಾನೂನು ಯಾರಿಗಾಗಿ ಎಂದು ಭಟ್ ಪ್ರಶ್ನಿಸಿದ್ದಾರೆ.

ಪರಿಸ್ಥಿತಿ ಹೀಗೇ ಮುಂದುವರೆದರೆ ಖಂಡಿತವಾಗಿ ಆಗಬಾರದ್ದು ಆಗಿಯೇ ತೀರುತ್ತದೆ. ಹಿಂದೂ ಸಂಘಟನೆಗಳು ಮತ್ತು ಹಿಂದೂ ಸಮಾಜವೇ ಕಾನೂನು ಮಾಡಬೇಕಾದ ಕೆಲಸ ಮಾಡಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗೋಹತ್ಯೆ, ಗೋಕಳ್ಳತನದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಮುಂದೆ ನಡೆಯುವ ಅನರ್ಥಗಳಿಗೆ ಸರ್ಕಾರ, ಜಿಲ್ಲಾಡಳಿತಗಳೇ ಹೊಣೆಯಾಗಬೇಕು. ಗೋವುಗಳಿಗೆ ನೆಮ್ಮದಿಯ ಬದುಕು ಈ ನೆಲದಲ್ಲಿ ಸಾಧ್ಯವಿಲ್ಲವೆಂದಾದರೆ ತೀರಾ ನಾಚಿಕೆಗೇಡು. ಇಂಥಹ ಧರ್ಮದ್ರೋಹದ ಪಾಪವನ್ನು ಇಡೀ ಸಮಾಜ ಹೊರಬೇಕು ಎಂದು ಭಟ್ ವಿಷಾದಿಸಿದ್ದಾರೆ.