ಭೋಪಾಲ್: ಕೊರೊನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲು ಮಾಡುತ್ತಿದೆ ಎಂಬ ಅಳಲು ತೋಡಿಕೊಂಡ ಪೋಷಕರಿಗೆ ಮಧ್ಯಪ್ರದೇಶ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು ‘ನೀವು ಹೋಗಿ ಸಾಯಿರಿ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.
ಇತ್ತೀಚೆಗಷ್ಟೇ ಸುಮಾರು 90-100 ವಿದ್ಯಾರ್ಥಿಗಳ ಪೋಷಕರು ಸಚಿವರ ನಿವಾಸಕ್ಕೆ ಭೇಟಿ ನೀಡಿದ್ದರು. ಹೆಚ್ಚುವರಿ ಶುಲ್ಕ ವಿಧಿಸಬಾರದೆಂಬ ಹೈಕೋರ್ಟ್ ಆದೇಶಗಳನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ನಾವೇನು ಮಾಡಬೇಕು?’ ಎಂದು ಪ್ರಶ್ನಿಸಿದರು. ಆಗ ಸಚಿವರು ‘ನೀವು ಹೋಗಿ ಸಾಯಿರಿ, ನಿಮಗೇನು ಇಷ್ಟಬರುತ್ತೋ ಹಾಗೆ ಮಾಡಿ’ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಸಚಿವ ಪರ್ಮಾರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ಮತ್ತು ಪೋಷಕರ ಸಂಘಟನೆ ಒತ್ತಾಯಿಸಿದೆ.