ಮಹಿಮೆಯೋ! ಪವಾಡವೋ! ಶ್ರೀ ಲಕ್ಷ್ಮೀಸಮುದ್ರತೀರ್ಥರ ಕಾಲಾವಧಿಯ ಘಟನೆ..

ಬರಹ: ಪಿ.ಲಾತವ್ಯ ಆಚಾರ್ಯ ಉಡುಪಿ.

1914-16 ರ ಸಂದರ್ಭದಲ್ಲಿ ನಡೆದ ಅಪೂರ್ವ ಘಟನೆ. ಶ್ರೀ ಶಿರೂರು ಮಠದ 27 ನೇ ಯತಿಗಳಾದ ಶ್ರೀಲಕ್ಷ್ಮೀಸಮುದ್ರತೀರ್ಥರ ಪರ್ಯಾಯದ ಸಂದರ್ಭ.

ಜಗತ್ತು ಮೊದಲನೇ ಮಹಾಯುದ್ಧದ ಭೀತಿಯಲ್ಲಿ ತಲ್ಲಣಿಸಿತ್ತು. ಜೊತೆಗೆ ಭಾರತ ದೇಶದಲ್ಲಿ ಸ್ವಾತಂತ್ರ್ಯಸಮರದ ಕಾವು ದಿನೇ ದಿನೇ ಉಲ್ಬಣಿಸುತ್ತಿತ್ತು. ಸಾಲದ್ದಕ್ಕೆ ಅನಿರೀಕ್ಷಿತವಾಗಿ ಹುಟ್ಟಿಕೊಂಡ ಭೀಕರ ಬರಗಾಲಕ್ಕೆ ಭಾರತೀಯರು ತರಗುಟ್ಟಿ ಹೋಗಿದ್ದರು.

ಆಗಿನ ಮೈಸೂರು ಈಗಿನ ಕರ್ನಾಟಕ ರಾಜ್ಯದ ಬಹುತೇಕ ಪ್ರದೇಶಗಳಲ್ಲಿದ್ದ ಕೆರೆ, ಬಾವಿ , ನದಿಗಳು ಮಳೆನೀರ ಹನಿ ಕಾಣದೆ ಒಣಗಿ ಬಟ್ಟಬಯಲಾಗಿದ್ದವು. ನೀರು, ತರಕಾರಿ, ಅಕ್ಕಿ, ದವಸಧಾನ್ಯಗಳಿಗೆ ಜನ ಪರದಾಡುತ್ತಿದ್ದರು.

ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಶ್ರೀ ಶೀರೂರು ಮಠದ 27ನೇ ಯತಿಗಳಾದ ಶ್ರೀಅನ್ನವಿಠಲದೇವರ ಮಹಾನ್ ಉಪಾಸಕರಾದ ಶ್ರೀಲಕ್ಷ್ಮೀಸಮುದ್ರತೀರ್ಥರ ದ್ವಿತೀಯ ಪರ್ಯಾಯ ಸಾಗುತ್ತಿತ್ತು.ಇವರಿಗೆ ಅನ್ನದಾನದಲ್ಲಿ ವಿಪರೀತ ಒಲವು.

ಹೀಗಾಗಿ ನಿರಂತರ ಅನ್ನದಾನಕ್ಕಾಗಿ ಪ್ರತ್ಯೇಕ ಬೃಹತ್ ಭೋಜನ ಶಾಲೆಯನ್ನೇ ನಿರ್ಮಿಸಿದ್ದರು. ಅನ್ನ ಪ್ರಸಾದ ಸ್ವೀಕರಿಸಿದ ಭಕ್ತರಿಗೆ ಪ್ರಾಣದೇವರ ವಿಶೇಷ ಅನುಗ್ರಹವಾಗಲಿ ಎಂಬ ಉದ್ದೇಶದಿಂದ ಅಲ್ಲೇ ಪ್ರಾಣದೇವರನ್ನೂ ಕೂಡಾ  ಪ್ರತಿಷ್ಠಾಪಿಸಿದ್ದರು.

ಆದರೆ ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ದೇವರ ನಿತ್ಯ ನೈವೇದ್ಯಕ್ಕೂ ತತ್ವಾರ ಆರಂಭವಾಯಿತು. ಜೊತೆಗೆ ಅಕ್ಕಿ, ದವಸಧಾನ್ಯಗಳು ಸಾಗಾಣಿಕೆಗೆ ಬ್ರಿಟಿಷ ಸರಕಾರವು ನಿರ್ಬಂಧ ಹೇರಿ ಶಿಕ್ಷಾರ್ಹ ಅಪರಾಧವೆಂದು ಘೋಷಿಸಿತು. ಇದರಿಂದಾಗಿ ಜನತೆ ಭಾರೀ ಇಕ್ಕಟ್ಟಿನಲ್ಲಿ ಸಿಲುಕಿದರು. ಮಾತ್ರವಲ್ಲ ದೇಶದ ಮಠ ಮಂದಿರಗಳ ನಿತ್ಯಪೂಜೆಗೂ ಆತಂಕ ಉಂಟಾಯಿತು.

ಉಡುಪಿಯ ಕಡೆಗೋಲಕೃಷ್ಣನಿಗೆ ಶ್ರೀಮಧ್ವಾಚಾರ್ಯರ ಕಾಲದಿಂದಲೂ ಪ್ರತಿನಿತ್ಯ ಪಂಚಭಕ್ಷ್ಯಸಹಿತ 14 ಭಾರೀ ಉರುಳೀ ಅನ್ನ ನೈವೇದ್ಯ ಸಮರ್ಪಣೆಯಾಗಲೇಬೇಕು. ಆದರೆ ಈ ಸಂಕಷ್ಟದ ಸನ್ನಿವೇಶದಲ್ಲಿ ಪರ್ಯಾಯ ಶ್ರೀಗಳವರಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಉಡುಪಿಯ ಹಿರಿಯರೊಬ್ಬರು ಅಂದರು “ಕೃಷ್ಣಮಠದಲ್ಲಿರುವ ಸುಬ್ರಮಣ್ಯದೇವರ ಸನ್ನಿಧಾನದಲ್ಲಿ ನಾಗಮಂಡಲ ಸೇವೆ ಸಲ್ಲಿಸಿ ಪ್ರಾರ್ಥಿಸಿ” ಎಂದರು. ನಾಗದೇವರನ್ನು ಪ್ರಾರ್ಥಿಸಿದರೆ ಭೂ ಸಮೃದ್ಧಿಯಾಗುವುದು.

ಪ್ರಕೃತಿ ಒಲಿಯುವುದು ಎಂಬ ಚಿಂತನೆ ನಾಗಮಂಡಲದ ಉದ್ದೇಶವಾಗಿತ್ತು. ಶ್ರೀಲಕ್ಷ್ಮೀಸಮುದ್ರತೀರ್ಥರು ಉಳಿದ ಏಳು ಮಠದ ಯತಿಗಳೊಡನೆ ಮಾತುಕತೆ ನಡೆಸಿ ಬೃಹತ್ ನಾಗಮಂಡಲ ಸೇವೆಯನ್ನು ಹರಸಾಹಸ ನಡೆಸಿ ಪೂರೈಸಿದರು. “ಚಿಂತೆ ಬೇಡ ನಿಮ್ಮ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗುವುದೆಂಬ” ನುಡಿಯು ನಾಗಮಂಡಲ ಸೇವೆಯಲ್ಲಿ  ಮೊಳಗಿತು. ಹಲವು ದಿನಗಳು ಕಳೆದವು ಸಮಸ್ಯೆಗಳು ಇನ್ನಷ್ಟು ಸಂಕೀರ್ಣವಾಗುತ್ತಿತ್ತು.

ಶ್ರೀಪಾದರು ತೀವ್ರವಾಗಿ ಚಿಂತಿತರಾದರು. “ಅನ್ನ ವಿಠ್ಠಲದೇವರ ಪರ್ಯಾಯದಲ್ಲಿ ದೇವರ ಅನ್ನ ನೈವೇದ್ಯಕ್ಕೂ ಇಷ್ಟೊಂದು ತೊಂದರೆ ಉಂಟಾಯಿತಲ್ಲ” ಎಂದು ಮನದಲ್ಲೇ ಕೊರಗಿದರು. ಅಂದು ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಬರಲೇ ಇಲ್ಲ. ಮಠದಲ್ಲಿ ದೇವರ ಮುಂಭಾಗದಲ್ಲೇ ಮಲಗಿದ್ದರು. ಬೆಳಿಗ್ಗೆ ಸುಮಾರು ನಾಲಕ್ಕು ಗಂಟೆ ಇರಬಹುದು. ಶ್ರೀಪಾದರು ಇನ್ನೇನು ಪೂಜೆಗೆ ಎದ್ದು ಹೊರಡುವವರಿದ್ದರು.

ಕಿಟಿಕಿಯಲ್ಲಿ ಯಾರೋ “ಗುರುಗಳೇ” ಅಂತಾ ಕರೆದಂತಾಯಿತು. ತಕ್ಷಣ ಕಿಟಕಿಯ ಬಳಿ ತೆರಳಿದ ಯತಿಗಳು ಏನು ಅಂತಾ ಕೇಳಿದರು. ಮಠದ ಹೊರಭಾಗದ ಕಿಟಕಿಯ ಬಳಿ ನಿಂತಿದ್ದ ವ್ಯಕ್ತಿಯು “ಗುರುಗಳೇ ನಿಮ್ಮೊಡನೆ ಮಾತನಾಡಲು ಇದೆ ತಾವು ಹೊರಗೆ ಬಂದರೆ ಮಾತನಾಡಬಹುದು” ಎಂದು ತಿಳಿಸಿದ.

ಬೆಳ್ಳಂಬೆಳಗ್ಗೆ ಯಾರೋ ಅಪರಿಚಿತನೊಬ್ಬ ಬಂದು ಕರೆಯುತ್ತಿದ್ದಾನಲ್ಲಾ ಎಂದು  ಯೋಚಿಸಿದ ಶ್ರೀಗಳು ಒಬ್ಬ ಸಿಬ್ಬಂದಿಯ ಜೊತೆ  ತಮ್ಮ ಮಠದ ಹೊರಗೆ ಬಂದರು. ಹೊರಭಾಗದಲ್ಲಿ ನಿಂತಿದ್ದ ವ್ಯಕ್ತಿಯು ಶ್ರೀಪಾದರಲ್ಲಿ ವಿನಯದಿಂದ ಹೇಳಿದ “ಗುರುಗಳೇ ನಿಮ್ಮಿಂದ ಸಹಾಯ ನಿರೀಕ್ಷಿಸಿ ಬಂದಿದ್ದೇನೆ. ಏನೆಂದರೆ ನಾನು ಶೃಂಗೇರಿ ಸಮೀಪದ ಹಳ್ಳಿಯ ರೈತ. ಕಳೆದ 10 ವರ್ಷದಿಂದ ಪ್ರತೀ ವರ್ಷ ನಾವು ಬೆಳೆಸಿದ ಅಕ್ಕಿ, ಬೇಳೆ, ದವಸ, ಧಾನ್ಯಗಳನ್ನು ಕಾಸರಗೋಡು ಸಮೀಪದ ಪಟ್ಟಣಕ್ಕೆ ಒಯ್ದು ಮಾರಾಟ ಮಾಡಿ ಬರುತ್ತಿದ್ದೆವು.

ಈ ಬಾರಿ ಬ್ರಿಟಿಷ ಸರಕಾರದವರು ಈ ಧಾನ್ಯಗಳ ಸಾಗಾಟಕ್ಕೆ ನಿರ್ಬಂಧ ಹೇರಿರುವ ವಿಚಾರ ದಾರಿಯಲ್ಲಿ ಬರುವಾಗ ತಿಳಿಯಿತು. ಹೇಗೋ ಕಷ್ಟಪಟ್ಟು ದಾರಿಯೆಲ್ಲಾ ಬದಲಿಸಿಕೊಂಡು ಕದ್ದು ಮುಚ್ಚಿ ಇಲ್ಲಿಯವರೆಗೆ ಬಂದಿದ್ದೇವೆ. ಇಲ್ಲಿಂದ ಮುಂದೆ ಸಾಗಾಟ ನಡೆಸಲು ತುಂಬಾ ಕಷ್ಟವಿದೆ ಅನ್ನೋ ವಿಚಾರ ತಿಳಿಯಿತು. ಬೆಳಕು ಹರಿಯುವ ಮೊದಲೇ ನಾವು ತಂದಿರುವ ಅಷ್ಟೂ ಅಕ್ಕಿ, ದವಸ ಧಾನ್ಯಗಳನ್ನು ನಿಮ್ಮ ಮಠದ ಗೋದಾಮಿನಲ್ಲಿ ಇರಿಸಿಕೊಂಡರೆ ನಾವು ಬದುಕಿ ಉಳಿಯುತ್ತವೆ ದಯವಿಟ್ಟು ಇರಿಸಿಕೊಳ್ಳಿ. ಆದಷ್ಟು ಶೀಘ್ರವಾಗಿ ಬಂದು ಇಲ್ಲಿಂದ ತೆಗೆದುಕೊಂಡು ಹೋಗುತ್ತೇವೆ” ಎಂದು ಶ್ರೀಪಾದರಲ್ಲಿ ಬೇಡಿಕೊಂಡ. ತಕ್ಷಣ ಶ್ರೀಪಾದರು ಆತನನ್ನು ಕೇಳಿದರು.. “ನೀನು ತಂದಿರುವ ದವಸಧಾನ್ಯಗಳು ಎಲ್ಲಿವೆ” ಅಂದಾಗ ರೈತನು ಶ್ರೀಪಾದರನ್ನು ಕೃಷ್ಣಮಠದ ಹಿಂಭಾಗದಲ್ಲಿದ್ದ ಗದ್ದೆಯ ಸಮೀಪ ಕರೆದುಕೊಂಡು ಹೋಗಿ ತನ್ನಲ್ಲಿದ್ದ ದವಸ ಧಾನ್ಯಗಳನ್ನು ತೋರಿಸಿದ. ಅದನ್ನು ಕಂಡ ಶ್ರೀಪಾದರು ಒಂದು ಕ್ಷಣ ಸ್ಥಂಬೀಭೂತರಾದರು.

ಸುಮಾರು 18 ಎತ್ತಿನಗಾಡಿಗಳ ಮೇಲ್ಭಾಗಕ್ಕೆ ಹಸಿರು ಹುಲ್ಲುಗಳನ್ನು ಹಾಸಿ ಒಳಭಾಗದಲ್ಲಿ ಗೌಪ್ಯವಾಗಿ ಅಕ್ಕಿ, ಬೇಳೆ, ದವಸ ಧಾನ್ಯಗಳ ರಾಶಿಯನ್ನು ಒಂದಿಂಚೂ ಸ್ಥಳವನ್ನು ಬಿಡದೇ ತುಂಬಿಸಿಡಲಾಗಿತ್ತು. ಅಷ್ಟೊಂದು ಆಹಾರ ಧಾನ್ಯಗಳನ್ನು ನೋಡಿದ ಶ್ರೀಪಾದರಿಗೆ ಮಾತೇ ಹೊರಡಲಿಲ್ಲ. ಮಾತು ಮುಂದುವರೆಸಿದ ರೈತ ಹೇಳಿದ. “ನಿಮಗೆ ಇದರ ಅವಶ್ಯಕತೆ ಇದ್ದರೆ ನೀವೇ ಬೇಕಾದರೆ ಖರೀದಿಸಿ” ಎಂದು ಹೇಳಿದ.

ಆದರೆ ಅಷ್ಟೊಂದು ಆಹಾರ ಧಾನ್ಯಗಳಿಗೆ ಒಮ್ಮೆಗೇ ಹಣ ನೀಡಲು ಶ್ರೀಪಾದರಿಗೆ ಅಸಾಧ್ಯವಾಗಿತ್ತು. ತಕ್ಷಣ ಶ್ರೀಪಾದರ ಮನದ ಇಂಗಿತವನ್ನು ಅರಿತ ರೈತ ಹೇಳಿದ. “ಗುರುಗಳೇ ನಾನು ಮೂರು ತಿಂಗಳ ನಂತರ ಮತ್ತೆ ಬರುತ್ತೇನೆ ಆ ಸಂದರ್ಭದಲ್ಲಿ ಹಣ ನೀಡಿ. ನೀವೇ ಎಲ್ಲವನ್ನೂ ಉಪಯೋಗಿಸಿಕೊಳ್ಳಿ” ಎಂದು ತಿಳಿಸಿ 18 ಗಾಡಿಯಲ್ಲಿದ್ದ ಆಹಾರ ಸರಂಜಾಮುಗಳನ್ನು ಮಠದಲ್ಲೇ ಇಳಿಸಿದ.18 ಗಾಡಿಗಳ ಸಾಗಾಣಿಕಾ ವೆಚ್ಚ ಸಹಿತ ಆಹಾರಧಾನ್ಯಗಳ ಮೌಲ್ಯದ ಪಟ್ಟಿಯನ್ನು ಶ್ರೀಪಾದರಿಗೆ ನೀಡಿ “ಮೂರು ತಿಂಗಳಲ್ಲಿ ಮತ್ತೆ ಬರುತ್ತೇನೆ” ಎಂದು ಹೇಳಿ ಬೆಳಗಾಗುತ್ತಲೇ ಬರಿಗೈಯಲ್ಲೇ ತನ್ನೂರಿಗೆ ತನ್ನ ಸಂಗಡಿಗರೊಡನೆ ಪ್ರಯಾಣ ಬೆಳೆಸಿದ.

ಈ ಘಟನೆಯಿಂದ ಶ್ರೀಲಕ್ಷ್ಮೀಸಮುದ್ರತೀರ್ಥರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಸೂರ್ಯೋದಯದ ಮೊದಲೇ ಮಠದ ಕೊಟ್ಟಾರ ಮತ್ತು ಪಣಿತವು (ಆಹಾರ ಧಾನ್ಯ ಸಂಗ್ರಹಿಸಿಡುವ ಕೊಠಡಿ) ಅಕ್ಕಿ, ಬೇಳೆ, ದವಸ ಧಾನ್ಯಗಳಿಂದ ತುಂಬಿ ಹೋಗಿತ್ತು. ಸಂಗ್ರಹವಾಗಿದ್ದ ಹೆಚ್ಚಿನ ಆಹಾರ ಧಾನ್ಯಗಳನ್ನು ಉಳಿದ ಏಳು ಮಠ ಮತ್ತು ಸಮೀಪದ ಕೆಲವು ಮಂದಿರಗಳಿಗೂ ಹಾಗೂ ಅರಸಿ ಬಂದ ಬಡಬಗ್ಗರಿಗೂ ಬಹಳ ಗುಟ್ಟಾಗಿ ವಿತರಿಸಿದರು. ಶ್ರೀಪಾದ ಆಶಯದಂತೆ ಕೃಷ್ಣಮುಖ್ಯಪ್ರಾಣದೇವರ ಪೂಜೆಯು ಮತ್ತಷ್ಟು ವೈಭವದಿಂದ ಮುಂದುವರಿಯಿತು. ಪ್ರತಿಯೊಬ್ಬ ಭಕ್ತರಿಗೂ ನಿರಂತರ ಅನ್ನದಾನವು ಅನ್ನವಿಠ್ಠಲದೇವರ ಪರ್ಯಾಯದಲ್ಲಿ ನಿರ್ವಿಘ್ನದಿಂದ ಸಾಗಿತು. ಭೂಮಿಗೆ ವಕ್ಕರಿಸಿದ್ದ ಕ್ಷಾಮ ದೂರವಾಗಿ ಮಳೆ ಬೆಳೆ ಮತ್ತೆ ಆರಂಭವಾಯಿತು.

ಆದರೆ ಆಹಾರ ಧಾನ್ಯಗಳನ್ನು ನೀಡಿದ್ದ ರೈತನು ಆತನ ಹಣವನ್ನು ಸ್ವೀಕರಿಸಲು ಮತ್ತೆ ಬರಲೇ ಇಲ್ಲವಲ್ಲಾ ಎಂದು ಶ್ರೀಪಾದರಿಗೆ ತುಂಬಾ ಚಿಂತೆಯಾಯಿತು. ಪರ್ಯಾಯ ಮುಗಿದ ನಂತರವೂ ಶ್ರೀಲಕ್ಷ್ಮೀಸಮುದ್ರತೀರ್ಥ ಶ್ರೀಪಾದರು ಪ್ರತಿದಿನವೂ ರೈತನ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಆತನ ಹಣವನ್ನು ಮತ್ತು ರೈತ ನೀಡಿದ್ದ ಆಹಾರಧಾನ್ಯಗಳ ಮೊತ್ತದ ಚೀಟಿಯನ್ನು ಸಣ್ಣ ಚೀಲದಲ್ಲಿ ತಮ್ಮ ಕಪಾಟಿನಲ್ಲಿ ಸಂಗ್ರಹಿಸಿಟ್ಟಿದ್ದರು. 1916ನೇ ಇಸವಿಯಲ್ಲಿ ಶ್ರೀಲಕ್ಷ್ಮೀಸಮುದ್ರತೀರ್ಥರು ವಿಷ್ಣು ಪಾದ ಸೇರಿದರು.

ಶ್ರೀಲಕ್ಷ್ಮೀಸಮುದ್ರತೀರ್ಥರು ತಾವು ರೈತನಿಂದ ಅಕ್ಕಿ ಪಡೆದ ವಿಚಾರವನ್ನು ತುಂಬಾ ಗೌಪ್ಯದಲ್ಲಿ ಇರಿಸಿದ್ದರು. ಆದರೆ  ಶ್ರೀಸೋದೆವಾದಿರಾಜ ಮಠದ ಶ್ರೀವಿಶ್ವೇಂದ್ರತೀರ್ಥರಿಗೆ ಮಾತ್ರ ತಿಳಿಸಿದ್ದರು.

ಶ್ರೀ ವಿಶ್ವೇಂದ್ರ ತೀರ್ಥರಿಗೆ ಎಲ್ಲಾ ವಿಚಾರವನ್ನು ಶ್ರೀ ಶಿರೂರು ಮಠದ 28ನೇ ಯತಿಗಳಾದ ಶ್ರೀ ಲಕ್ಷ್ಮಿಂದ್ರತೀರ್ಥರಿಗೂ ತಿಳಿಸಿದ್ದರು.

ಅಂದು ತಮ್ಮ ಗುರುಗಳಾದ ಶ್ರೀಲಕ್ಷ್ಮೀಸಮುದ್ರತೀರ್ಥರ ಪ್ರಾರ್ಥನೆಯನ್ನು ಸುಬ್ರಮಣ್ಯ ದೇವರು ಈಡೇರಿಸಿದಕ್ಕಾಗಿ ಸುಬ್ರಮಣ್ಯ ದೇವರಿಗೆ ಶ್ರೀಲಕ್ಷ್ಮಿಂದ್ರತೀರ್ಥ ಶ್ರೀಪಾದರು ನೂತನ ಗುಡಿಯನ್ನು ಸಮರ್ಪಿಸಿದರು. ಇದೇ ಪರಂಪರೆಯ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿಯ ಬೃಹತ್ ಕವಚವನ್ನು ಅರ್ಪಿಸಿದ್ದರು.

ಆದರೆ ಹಳೇ ಬಾಕಿಯ ವಸೂಲಿಗಾಗಿ ಉಡುಪಿಗೆ ಬರಬೇಕಾಗಿದ್ದ18 ಎತ್ತಿನ ಗಾಡಿಗಳ ಒಡೆಯ ರೈತ ಮತ್ತೆಂದೂ ಕಾಣ ಸಿಗಲೇ ಇಲ್ಲವಂತೆ !

ಎಲ್ಲರ ಒಳಗಿದ್ದು ಯಾರಿಗೂ ಕಾಣಿಸದ ಮಹಾಒಡೆಯನ ಆಟವನ್ನು ಹೇಗೆ ಬಣ್ಣಿಸಲಿ.

ಬರಹ: ಪಿ.ಲಾತವ್ಯ ಆಚಾರ್ಯ ಉಡುಪಿ.